ಸರ್ವೆ ಸೆಟ್ಲ್‌ಮೆಂಟ್‌ನಲ್ಲಾದ ಅನ್ಯಾಯ ಸರಿಪಡಿಸಲು ಒತ್ತಾಯ

| Published : Mar 16 2024, 01:53 AM IST

ಸಾರಾಂಶ

ಸುಶೀಲಾನಗರ ಗ್ರಾಮದ ೨೩೪ ಎಕರೆ, ಸಿದ್ದಾಪುರ ಗ್ರಾಮದ ಸುಮಾರು ೩೦೦ ಎಕರೆ, ಧರ್ಮಾಪುರ- ೧೮ ಎಕರೆ, ಹುಲಿಕುಂಟೆ ಹಾಗೂ ಇತರೆ ಗ್ರಾಮದ ಜಮೀನುಗಳ ಪಹಣಿಗಳನ್ನು ರದ್ದು ಪಡಿಸಲಾಗಿದೆ.

ಸಂಡೂರು: ತಾಲೂಕಿನ ೧೪ ಗ್ರಾಮಗಳ ಸರ್ವೆ ಸೆಟ್ಲ್‌ಮೆಂಟ್‌ನಲ್ಲಿ ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ರಾಜ್ಯ ಹಸಿರು ರೈತ ಸಂಘದ ಮುಖಂಡರು ಶುಕ್ರವಾರ ತಹಶೀಲ್ದಾರ್ ಅನಿಲ್‌ಕುಮಾರ್‌ಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಸಂಘದ ತಾಲೂಕು ಘಟಕದ ಅಧ್ಯಕ್ಷ ಪಿ.ಎಸ್. ಧರ್ಮಾನಾಯ್ಕ, ಕಂದಾಯ ಇಲಾಖೆಯಿಂದಲೇ ತಾಲೂಕಿನ ೧೪ ಗ್ರಾಮಗಳ ಸರ್ವೇ ಸೆಟ್ಲ್‌ಮೆಂಟ್‌ ನಡೆದಿದೆ. ಆಗ ಹಳೆ ಕೈಬರಹದ ಪಹಣಿಗಳನ್ನು ಪರಿಶೀಲಿಸಿ, ರೈತರಿಗೆ ಹಕ್ಕುಪತ್ರಗಳನ್ನು (ಫಾರಂ-೨) ನೀಡಲಾಗಿದೆ. ಈ ಸೆಟ್ಲ್‌ಮೆಂಟ್‌ ಸರಿ ಇಲ್ಲ. ಹಲವು ಕೃಷಿ ಯೋಗ್ಯ ಭೂಮಿಯನ್ನು ಖರಾಬು ಎಂದು ಗುರುತಿಸಿ, ಪಹಣಿ ರದ್ದು ಪಡಿಸಲಾಗಿದೆ. ಇದನ್ನುರೈತ ಸಂಘ ಖಂಡಿಸುತ್ತದೆ ಎಂದರು.ಸುಶೀಲಾನಗರ ಗ್ರಾಮದ ೨೩೪ ಎಕರೆ, ಸಿದ್ದಾಪುರ ಗ್ರಾಮದ ಸುಮಾರು ೩೦೦ ಎಕರೆ, ಧರ್ಮಾಪುರ- ೧೮ ಎಕರೆ, ಹುಲಿಕುಂಟೆ ಹಾಗೂ ಇತರೆ ಗ್ರಾಮದ ಜಮೀನುಗಳ ಪಹಣಿಗಳನ್ನು ರದ್ದು ಪಡಿಸಲಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಈಗಾಗಲೇ ರೈತರು ಪಟ್ಟಾ ಹಾಗೂ ಪಹಣಿ ಮೂಲಕ ಸೊಸೈಟಿ ಹಾಗೂ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ಕೂಡಲೇ ರೈತರ ಪಹಣಿಗಳು ಮೊದಲು ಯಾವ ರೀತಿ ಇದ್ದವೋ ಅದೇ ರೀತಿ ಪಹಣಿಗಳನ್ನು ಮಾಡಬೇಕು ಎಂದು ಆಗ್ರಹಿಸಿದರು.ಸಂಡೂರು ಬೈಪಾಸ್‌ ರಸ್ತೆಯನ್ನು ನಿರ್ವಹಿಸುತ್ತಿರುವ ಖಾಸಗಿ ಕಂಪನಿಯವರು ರಸ್ತೆಯನ್ನು ಅಭಿವೃದ್ಧಿ ಪಡಿಸದೇ ಟೋಲ್ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕೃಷ್ಣಾನಗರ ಹಾಗೂ ದೌಲತ್‌ಪುರದಿಂದ ತಿಮ್ಮಪ್ಪನಗುಡಿಗೆ ಹೋಗುವ ಮಾರ್ಗದಲ್ಲಿ ಅದಿರು ಸಾಗಣೆ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಂಡು ಆ ಭಾಗದ ರೈತರಿಗೆ ಮತ್ತು ಭಕ್ತರಿಗೆ ಅನುಕೂಲ ಕಲ್ಪಿಸಬೇಕು. ಹಲವು ದಶಕಗಳಿಂದ ಅರಣ್ಯ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು. ಪುರಾತನ ಡೊಂಬರಹಳ್ಳಿ ಆಂಜನೇಯ ದೇವಸ್ಥಾನಕ್ಕೆ ಹೋಗಲು ರಸ್ತೆ ಇಲ್ಲ. ದೇವಸ್ಥಾನಕ್ಕೆರಸ್ತೆ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂಬುದು ನಮ್ಮ ಬೇಡಿಕೆಗಳಾಗಿವೆ. ಇವುಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ರೈತ ಸಂಘದ ಮುಖಂಡರಾದ ರಾಜಶೇಖರಗೌಡ, ವಿ.ಜೆ. ಶ್ರೀಪಾದಸ್ವಾಮಿ, ಕೆ.ದೇವೇಂದ್ರಪ್ಪ, ಪರಶುರಾಮ, ಫಕ್ರುದ್ದೀನ್, ಚೌಡಪ್ಪ, ಎನ್.ದೊಡ್ಡಬಸಪ್ಪ, ಕೊಮಾರಪ್ಪ, ಕೆ.ವುದೇದಪ್ಪ, ಬಿ.ರಾಜಣ್ಣ, ಸೋಮಣ್ಣ, ರಾಮಾನಾಯ್ಕ, ತಿಮ್ಮಯ್ಯ, ಶ್ರೀನಿವಾಸ, ಮೇಘರಾಜ, ಟಿ.ಕಾರ್ತಿಕ್ ಉಪಸ್ಥಿತರಿದ್ದರು.