ರೈತರ ಖಾತೆಗೆ ಬರ ಪರಿಹಾರ ಜಮಾ ಮಾಡಲು ಒತ್ತಾಯ

| Published : May 18 2024, 12:39 AM IST / Updated: May 18 2024, 12:40 AM IST

ಸಾರಾಂಶ

ರೈತರ ಖಾತೆಗೆ ಬರ ಪರಿಹಾರವನ್ನು ರಾಜ್ಯ ಸರ್ಕಾರ ಜಮಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಒತ್ತಾಯಿಸಿದರು.

ಸಿಂಧನೂರು: ರೈತರ ಖಾತೆಗೆ ಬರ ಪರಿಹಾರವನ್ನು ರಾಜ್ಯ ಸರ್ಕಾರ ಜಮಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ಒತ್ತಡದಿಂದ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೊಳಿಸಿದೆ. ಖುಷ್ಕಿ ಭೂಮಿ ಒಂದು ಹೆಕ್ಟೇರ್‌ಗೆ ₹8500, ನೀರಾವರಿ ಭೂಮಿ ಒಂದು ಹೆಕ್ಟೇರ್‌ಗೆ ₹17000 ಬರ ಪರಿಹಾರ ಜಮಾಯಿಸಬೇಕು. ಆದರೆ ಹಣ ಕಡಿತಗೊಳಿಸಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಅವೈಜ್ಞಾನಿಕವಾಗಿ ರೈತರ ಬೆಳೆ ಹಾನಿ ಸರ್ವೇ ನಡೆಸಿದ್ದಾರೆ. ಬೆಳೆ ಬೆಳೆದಲ್ಲಿ ಬೆಳೆ ಇಲ್ಲವೆಂದು, ಬೆಳೆ ಇಲ್ಲದಿದ್ದಲ್ಲಿ ಬೆಳೆ ಇದೆಯೆಂದು ಅಥವಾ ಪಾಡಾ ಎಂದು ಪಹಣಿಯಲ್ಲಿ ತೋರಿಸಲಾಗಿದೆ. ಕೂಡಲೇ ಶಾಸಕರು, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ಗಮನಹರಿಸಿ ಸರ್ವೇಯನ್ನು ಸರಿಪಡಿಸಿ, ರೈತರಿಗೆ ಬರ ಪರಿಹಾರದ ಹಣ ಜಮಾ ಆಗುವಂತೆ ಮಾಡಬೇಕು. ಬರ ಪರಿಹಾರದ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಾಸಲಮರಿ, ತಾಲೂಕು ಘಟಕದ ಅಧ್ಯಕ್ಷ ಪಿ.ಹುಲಿಗೆಯ್ಯ ತಿಮ್ಮಾಪುರ, ಸದಸ್ಯ ಯಮನಪ್ಪ ಪಗಡದಿನ್ನಿ ಇದ್ದರು.