ಸಾರಾಂಶ
ಹೊಸಪೇಟೆ: ಸಾಕ್ಷರತೆಯಲ್ಲಿ ಕೇರಳ ರಾಜ್ಯವನ್ನು ಹಿಂದಿಕ್ಕುವಷ್ಟು ಶೈಕ್ಷಣಿಕ ಪ್ರಗತಿ ಕಾರ್ಯಗಳು ವಿವಿಧ ರಾಜ್ಯಗಳು ಸಾಧಿಸಬೇಕಿದೆ. ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯಿದೆಯಡಿ ಯಾವ ಮಗು ಶಿಕ್ಷಣದಿಂದ ವಂಚಿತರಾಗದಿರಲಿ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್. ಸುಬ್ರಮಣ್ಯ ಹೇಳಿದರು.ನಗರದ ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಶಾಲೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸಂವಿಧಾನದ 21ಎ ವಿಧಿಯ ಅನ್ವಯ ಶಿಕ್ಷಣ ಹಕ್ಕು ಕಾಯಿದೆಯಡಿ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ಹಕ್ಕಿನ ಪ್ರಕಾರ ಎಲ್ಲ ಮಕ್ಕಳು ಯಾವುದೇ ಶಾಲೆಯಲ್ಲಿ ಶಿಕ್ಷಣ ಪಡೆಯಬಹುದು. ಮಕ್ಕಳಲ್ಲಿ ಜಾತಿ, ಲಿಂಗ, ಧರ್ಮ ಮತ್ತು ಇತರೆ ಕಾರಣಗಳಿಂದ ವಿದ್ಯಾಭ್ಯಾಸ ಮಾಡುವುದಕ್ಕೆ ಅವಕಾಶ ನಿರಾಕರಿಸುವಂತಿಲ್ಲ. ಕೇರಳ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದೆ. ನಿರುದ್ಯೋಗ ಸಮಸ್ಯೆ ತೀರಾ ಕಡಿಮೆ ಇದೆ. ಕೇರಳ ಕೇವಲ ಸಾಕ್ಷರತೆಯಲ್ಲಿ ಅಷ್ಟೇ ಅಲ್ಲದೇ ವಿವಿಧ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಿದೆ. ಇದಕ್ಕೆ ಕಾರಣ ಶಿಕ್ಷಣಕ್ಕೆ ಮೊದಲನೇ ಆದ್ಯತೆ ನೀಡಿರುವುದಾಗಿದೆ. ಮಕ್ಕಳಿಗೆ ಶೈಕ್ಷಣಿಕ ಪೂರಕವಾದ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಕೇರಳ ರಾಜ್ಯವನ್ನು ಮಾದರಿಯನ್ನಾಗಿಸಿಕೊಂಡು ಉಳಿದ ಎಲ್ಲ ರಾಜ್ಯಗಳಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಕಡ್ಡಾಯ ಶಿಕ್ಷಣ ಕಾಯಿದೆಯನ್ನು ಪ್ರಾಮಾಣಿಕತೆಯಿಂದ ಪಾಲಿಸಬೇಕಿದೆ ಎಂದರು.ಶಾಲಾ ಆವರಣದಿಂದ 200 ಮೀಟರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು, ಮದ್ಯ ಮಾರಾಟ ಮತ್ತು ಮಾದಕ ವಸ್ತುಗಳನ್ನು ನಿಷೇಧಿಸಲಾಗಿದೆ. ಆದರೂ ಬಹುತೇಕ ಶಾಲೆಗಳ ಮುಂದೆಯೇ ತಂಬಾಕು ಉತ್ಪನ್ನ ಸೇರಿ ಮಾದಕ ವಸ್ತುಗಳ ಮಾರಾಟ ನಡೆಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಗುಡ್ ಟಚ್, ಬ್ಯಾಡ್ ಟಚ್‌ಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ರಕ್ಷಣಾ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್ ಮಾತನಾಡಿ, ಪ್ರತಿ ಮಕ್ಕಳಲ್ಲಿರುವ ಮುಗ್ಧತೆ, ಸಂತೋಷವನ್ನು ಸಂಭ್ರಮಿಸುವ ಆಚರಣೆಯೇ ಮಕ್ಕಳ ದಿನಾಚರಣೆಯಾಗಿದೆ. ಪಂಡಿತ್ ಜವಾಹರ್ ಲಾಲ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ನೆಹರು ಅವರಿಗೆ ಮಕ್ಕಳೆಂದರೇ ಅಪಾರ ಪ್ರೀತಿ, ಹಾಗಾಗಿ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆ ಆಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರ ಜೀವನದಲ್ಲಿ ಖುಷಿ ತುಂಬುವ ಚಿಕ್ಕ ಮಕ್ಕಳಿಗೆ ಪ್ರೀತಿ, ಪ್ರೋತ್ಸಾಹ ಮತ್ತು ಸಕಾರಾತ್ಮಕತೆಯನ್ನು ವ್ಯಕ್ತಪಡಿಸಲು ಈ ದಿನ ಮೀಸಲಾಗಿದೆ. ಇಂದಿನ ಮಕ್ಕಳು ರಾಷ್ಟ್ರದ ಮುಂದಿನ ಸತ್ಪ್ರಜೆಗಳು ಎಂಬುದನ್ನು ನೆಹರು ಅವರು ನಂಬಿದ್ದರು ಎಂದರು.ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ವೆಂಕಟೇಶ ರಾಮಚಂದ್ರಪ್ಪ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣ ತಮ್ಮ ಜನ್ಮದಿವನ್ನು ಶಿಕ್ಷಕರಿಗೆ ಸಮರ್ಪಿಸಿದರೆ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಜನ್ಮದಿನವನ್ನು ಮಕ್ಕಳಿಗೆ ಮೀಸಲಿರಿಸಿ ಮಕ್ಕಳ ದಿನಾಚರಣೆ ನಿಗದಿಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಪೋಷಕರು ಮತ್ತು ಶಿಕ್ಷಕರು ಸದವಕಾಶ ನೀಡಬೇಕು. ನಮ್ಮ ದೇಶ ಅಭಿವೃದ್ಧಿಗೆ ಮುಂದಿನ ಸತ್ಪ್ರಜೆಗಳ ಕೊಡುಗೆ ಹೆಚ್ಚಿದೆ. ಹಾಗಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಕ್ಕಳಿಗೆ ಪ್ರಮುಖವಾಗಿದೆ ಎಂದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಆಡಳಿತಾಧಿಕಾರಿ ಎಂ.ಗುರುರಾಘವೇಂದ್ರಚಾರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ ಮೂರ್ತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಕುಮಾರ, ಮಹಿಳಾ ಸಮಾಜ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ರಮಾ ಆರ್., ಚಿತ್ತವಾಡ್ಗಿ ಪಿಐ ಸೋಮ್ಲನಾಯಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))