ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ವಿಶೇಷಚೇತನರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ
ಲಕ್ಷ್ಮೇಶ್ವರ: ಮತದಾನ ಅನ್ನೋದು ನಮ್ಮ ದೇಶದ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕು. ಭಾರತದ ಪ್ರತಿಯೊಬ್ಬ ಅರ್ಹ ಪ್ರಜೆ ಮತದಾನ ಮಾಡುವುದು ಕಡ್ಡಾಯವಾಗಿದೆ ಎಂದು ಲಕ್ಷ್ಮೇಶ್ವರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.
ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿಶೇಷಚೇತನರ ಸಹಯೋಗದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.ಲೋಕಸಭಾ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ವಿಶೇಷಚೇತನರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಮಾಜದ ಪ್ರತಿಯೊಂದು ವರ್ಗದವರೂ ತಪ್ಪದೆ ಮತದಾನ ಮಾಡುವಂತೆ ಉತ್ತೇಜಿಸುವುದು ಈ ಪ್ರಚಾರದ ಉದ್ದೇಶವಾಗಿದೆ ಎಂದು ಹೇಳಿದರು.
ಚುನಾವಣಾ ಆಯೋಗವು ಸಮಾಜದ ಪ್ರತಿಯೊಂದು ವರ್ಗವು ಮತ ಚಲಾಯಿಸಬೇಕು ಎಂಬ ಗುರಿ ಹೊಂದಿದೆ. ವಿಶೇಷಚೇತನರು, ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿದ್ದು, ಅವರು ಸಹ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು. ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.ಜಾಥಾ ಅಂಗವಾಗಿ ವಿಶೇಷಚೇತನರಿಂದ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ರ್‍ಯಾಲಿ ತಾಪಂ ಕಚೇರಿಯಿಂದ ಆರಂಭವಾಗಿ ಪುರಸಭೆ ಕಚೇರಿ, ತಾಲೂಕಾಸ್ಪತ್ರೆ ವೃತ್ತ, ಶಿಗ್ಲಿ ನಾಕಾ ಮೂಲಕ ನಗರದ ಬಸ್ ನಿಲ್ದಾಣಕ್ಕೆ ಬಂದು ಮುಕ್ತಾಯವಾಯಿತು. ಮತದಾನ ಜಾಗೃತಿ ಪ್ಲೇಕ್ಸ್ ಕಾರ್ಡ್, ಘೋಷಣೆಗಳು ಜನರ ಗಮನ ಸೆಳೆದವು.
ಎಂಆರ್‌ಡಬ್ಲು ಭಾರತಿ ಮೂರಶಿಳ್ಳಿನ, ವಿಆರ್‌ಡಬ್ಲುಗಳಾದ ನಾಮದೇವ ಲಮಾಣಿ, ಶರಣಪ್ಪ, ಮಂಜನಾಥ, ಲಕ್ಷ್ಮವ್ವ ಕರಿನಿಂಗಣ್ಣವರ, ಜಯಶ್ರೀ ಪೂಜಾರ, ಸುಮಾ ಬೆಟಗೇರ ಇತರಿದ್ದರು.