ಮಕ್ಕಳ ದಿನಾಚರಣೆ ಅಂಗವಾಗಿ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೊಡುಗೆಯಾಗಿ ನೀಡಿದ್ದಾರೆ.
ಹರಪನಹಳ್ಳಿ: ತಾಲೂಕಿನ ಕಾನಹಳ್ಳಿ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ನಿರ್ಮಲಾ ಅವರು ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣವನ್ನು ಕೂಡಿಟ್ಟು ತಮ್ಮೂರಿನ ಸರ್ಕಾರಿ ಶಾಲೆಗೆ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೊಡುಗೆಯಾಗಿ ನೀಡಿದ್ದಾರೆ.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್ ಸಮ್ಮುಖದಲ್ಲಿ ಶಾಲೆಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉದಯಶಂಕರ್, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗಿದೆ. ನಮ್ಮ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಿರ್ಮಲಾ ಗೃಹಲಕ್ಷ್ಮಿಯಿಂದ ಬಂದ ಹಣದಲ್ಲಿ ಶಾಲೆಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೊಡುಗೆಯಾಗಿ ನೀಡಿ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.ಗ್ಯಾರಂಟಿ ಯೋಜನೆಗಳನ್ನು ಅಪಮಾನಿಸುವ ಜನರಿಗೆ ನಮ್ಮ ಗ್ಯಾರಂಟಿ ಫಲಾನುಭವಿಗಳೆ ಉತ್ತರ ಕೊಡುವಂತ ಕೆಲಸ ಮಾಡುತ್ತಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಪಾಂಡುರಂಗಪ್ಪ, ಕೆ. ನಾಗರಾಜ, ಓಮಪ್ಪ, ಫಕೀರಪ್ಪ, ಬಸವರಾಜ, ಪ್ರಕಾಶ್, ಮುಖ್ಯ ಶಿಕ್ಷಕ ಭೀಮರಾಜ್, ಶಿಕ್ಷಕರಾದ ನಾಗರಾಜ, ಸುಮಲತಾ, ಗೌರಮ್ಮ ಸೇರಿದಂತೆ ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಗ್ರಾಮಸ್ಥರು ಇದ್ದರು.