ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಂಪ್ಯೂಟರ್ ಶಿಕ್ಷಣ ಕೇವಲ ನಗರವಾಸಿಗಳಿಗೆ ಸೀಮಿತವಾಗದೆ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಬೇಕಾಗಿದೆ. ಇಂದಿನ ರೈತರ ಮಕ್ಕಳೇ ನಾಳಿನ ಪ್ರಗತಿಪರ ರೈತರಾಗುತ್ತಾರೆ. ಅವರಿಗೆ ಕಂಪ್ಯೂಟರ್ ಶಿಕ್ಷಣವಿಲ್ಲದಿದ್ದರೆ ವಿವಿಧ ಕಂಪನಿಗಳು ಮಾಡುವ ಮೋಸವನ್ನು ಬೇಧಿಸಲು ಸಾದ್ಯವಾಗಲ್ಲ. ಅದಕ್ಕಾಗಿ ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಕಂಪ್ಯೂಟರ್ ಮೂಲಭೂತ ತಂತ್ರಜ್ಞಾನದ ಅವಶ್ಯಕತೆ ಇದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎಚ್.ಆರ್. ನಾರಾಯಣರೆಡ್ಡಿ ಅಭಿಪ್ರಾಯಪಟ್ಟರು.ತಾಲೂಕಿನ ದೊಡ್ಡಪೈಲಗುರ್ಕಿ ಪಂಚಾಯ್ತಿ ವ್ಯಾಪ್ತಿಯ ಹರಿಸ್ಥಳ ಮತ್ತು ಗೌಡನಹಳ್ಳಿ ಜಂಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗೋಪೂಜೆ ಮತ್ತು ಕಂಪ್ಯೂಟರ್ ವಿತರಣಾ ಸಮಾರಂಭದಲ್ಲಿ ಗೋಪೂಜೆ ನೆರವೇರಿಸಿದ ನಂತರ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ನಮ್ಮೂರ ಸರ್ಕಾರಿ ಶಾಲೆಗೆ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆಯಿಂದ ಕಂಪ್ಯೂಟರ್ ಒದಗಿಸಿಕೊಟ್ಟು ರೈತರ ಮಕ್ಕಳೂ ಕಂಪ್ಯೂಟರ್ ಕಲಿಕೆಗೆ ಅವಕಾಶ ಮಾಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ನಮ್ಮ ಎರಡೂ ಗ್ರಾಮಗಳಲ್ಲಿ ನೂರಕ್ಕೆ ನೂರು ರೈತರ ಮಕ್ಕಳೇ ಇದ್ದಾರೆ. ಈ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾರಾಯಣಮೂರ್ತಿ ಆಸಕ್ತಿಯಿಂದಾಗಿ ಶಾಲಾ ವಾತಾವರಣ ಅತ್ಯಂತ ಸುಂದರವಾಗಿ ರೂಪುಗೊಂಡಿದೆ. ರೈತರ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ ಅಗತ್ಯವಿದೆ. ರೈತರ ಮಕ್ಕಳಿಗೂ ಉನ್ನತ ಶಿಕ್ಷಣ ಬೇಕಿದೆ. ಇಲ್ಲದಿದ್ದರೆ ಈಗಿನ ಕಾಲದಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಕೊಡುವವರೇ ಇಲ್ಲದಂತಾಗಿದೆ. ಕಂಪ್ಯೂಟರ್ ಶಿಕ್ಷಣ ಇಲ್ಲದಿದ್ದರೆ ರೈತರಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಗೊಬ್ಬರ ಮತ್ತು ಕೀಟನಾಶಕ ಕಂಪನಿಗಳು ಮಾಡುವ ಮೋಸ ಕಂಡು ಹಿಡಿಯಲಾಗುವುದಿಲ್ಲ. ರೈತ ಕೃಷಿಯಲ್ಲೀಗ ಎಂಜಿನಿಯರುಗಳೂ ಬೇಕು. ಉನ್ನತ ಮಟ್ಟದ ತಂತ್ರಜ್ಞಾನವೂ ಬೇಕಾಗಿದೆ. ಹಾಗಾಗಿ ಕೇವಲ ಫ್ಯಾಕ್ಟರಿಗಳಲ್ಲಿ ಮಾತ್ರ ಕಂಪ್ಯೂಟರ್ ಬಳಕೆ ಎಂಬುದಿಲ್ಲ. ಗ್ರಾಮೀಣ ಭಾಗದ ಪಂಚಾಯಿತಿಯಿಂದ ಹಿಡಿದು ಪ್ರತಿಯೊಂದು ಮನೆಯಲ್ಲೂ ತಂತ್ರಜ್ಞಾನ ಮಾಹಿತಿ ಬೇಕಾಗಿದೆ ಎಂದು ಹೇಳಿದರು.ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣಮೂರ್ತಿ ಮಾತನಾಡಿ, ಕೇವಲ ಇಪ್ಪತೈದು ಮಕ್ಕಳಿದ್ದ ಶಾಲೆಯಲ್ಲೀಗ ಐವತೈದು ಮಕ್ಕಳು ಪ್ರವೇಶ ಹೊಂದುವಂತೆ ಮಾಡಿದ್ದೂ ಮುಂದಿನ ವರ್ಷದ ವೇಳೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಹೊರಗಡೆ ಖಾಸಗಿ ಶಾಲೆಗಳಿಗೆ ಹೋಗುತ್ತಿರುವ ಮಕ್ಕಳನ್ನೆಲ್ಲಾ ನಮ್ಮ ಶಾಲೆಗೆ ಸೆಳೆದು ಕನಿಷ್ಠ ನೂರು ಮಕ್ಕಳು ಈ ಶಾಲೆಯಲ್ಲಿ ಅಭ್ಯಾಸ ಮಾಡುವಂತೆ ಶ್ರಮಹಾಕುತಿದ್ದೇವೆ. ಅದಕ್ಕೆ ಈ ಗ್ರಾಮದ ಹಿರಿಯರು, ಹಳೇ ವಿದ್ಯಾರ್ಥಿಗಳು, ಎಸ್ಡಿಎಂಸಿ ಹಾಗೂ ಪಂಚಾಯಿತಿ ಸದಸ್ಯರ ಸಹಾಯ ಬೇಡುತಿದ್ದೇವೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಹರಿಸ್ಥಳ- ಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ಕಂಪ್ಯೂಟರ್ ವಿತರಣೆಗೂ ಮುನ್ನ ಶಾಲೆಗೆ ಆಗಮಿಸಿದ ಅತಿಥಿ ಗಣ್ಯರನ್ನು ವೇದಿಕೆಗೆ ಕರೆತಂದ ಶಾಲಾ ಬ್ಯಾಂಡ್ ಸೆಟ್ ಮಕ್ಕಳು ಮೊದಲು ರೈತ ಸ್ನೇಹಿ ಹಸುಗಳಿಗೆ ಪೂಜೆ ಸಲ್ಲಿಸಿ, ವಿಭಿನ್ನ ಆಚರಣೆ ಮುಖಾಂತರ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗಾಯಿತ್ರಮ್ಮ, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳಾದ ಶಿವಪ್ಪ, ಪೆರೇಸಂದ್ರ ಕೃಷ್ಣಾರೆಡ್ಡಿ, ಜಿ.ಎ.ವೆಂಕಟರೆಡ್ಡಿ, ಗೌಡನಹಳ್ಳಿ ಗ್ರಾಪಂ ಸದಸ್ಯೆ ಅನಿತ, ಟಿಎಟಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಜಿ ವೆಂಕಟರೆಡ್ಡಿ, ಹರಿಸ್ಥಳ ನಾರಾಯಣಸ್ವಾಮಿ ಮತ್ತು ಪದಾಧಿಕಾರಿಗಳು, ತಾಪಂ ಮಾಜಿ ಅಧ್ಯಕ್ಷ ಕೃಷ್ಣಾರೆಡ್ಡಿ, ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಚಂದ್ರಕಲಾ, ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಗೌರವಾಧ್ಯಕ್ಷ ಹೋಟೆಲ್ ರಾಮಣ್ಣ, ಕೆ.ಎಸ್.ನಾರಾಯಣಸ್ವಾಮಿ, ಎಸ್ ಡಿಎಂಸಿ ಅಧ್ಯಕ್ಷ ವೆಂಕಟೇಶ್, ದೀನದಯಾಳು ನಾರಾಯಣಪ್ಪ ಮತ್ತಿತರರು ಇದ್ದರು.