ಸಾರಾಂಶ
ರಾಮನಗರ: ನೂರಾರು ವರ್ಷಗಳ ಹಿಂದಿನ ಕಡತಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಜೋಪಾನ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣ ಯೋಜನೆ ಜಾರಿಗೆ ತಂದಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ನಗರದ ತಾಲೂಕು ಕಚೇರಿ ಅಭಿಲೇಖಾಲಯ ಶಾಖೆಯಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆ ಮಹತ್ವಾಕಾಂಕ್ಷಿ ಯೋಜನೆ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಮನೆ, ಜಮೀನು, ಆಸ್ತಿಗೆ ಸಂಬಂಧಿಸಿದ ಎಲ್ಲಾ ಪತ್ರಗಳು ಹಾಗೂ ದಾಖಲಾತಿಗಳನ್ನು ಜೋಪಾನವಾಗಿ ಇಟ್ಟುಕೊಳ್ಳಲು ಆಧುನೀಕರಣ ಮಾಡಲಾಗಿದೆ. ರಾಮನಗರದಲ್ಲಿ ಸುಮಾರು 40 ಲಕ್ಷ ಹಾಳೆಗಳನ್ನು ಸ್ಕ್ಯಾನ್ ಮಾಡಬೇಕಾಗಿದ್ದು, ಈಗಾಗಲೇ 5 ಲಕ್ಷ ಹಾಳೆಗಳು, 20 ಸಾವಿರ ಕಡತಗಳನ್ನು ಸ್ಕ್ಯಾನ್ ಮಾಡಿದ್ದು, ಶೀಘ್ರದಲ್ಲೇ ಬಾಕಿ ಇರುವ ಹಾಳೆಗಳನ್ನು ಸ್ಕ್ಯಾನ್ ಮಾಡಲಾಗುವುದು ಎಂದು ಹೇಳಿದರು.
ಸರ್ಕಾರ 10 ಉಪಕರಣಗಳನ್ನು ನೀಡಿದೆ. ತರಬೇತಿ ಆಗಿರುವವರಿಗೆ ಈ ಅವಕಾಶ ನೀಡಲಾಗಿದೆ. ಪ್ರತಿ ದಿನ ಯಾರು ಎಷ್ಟು ಸ್ಕ್ಯಾನ್ ಮಾಡಿದ್ದಾರೆ ಎಂಬುದರ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಈ ಕೆಲಸ ವ್ಯವಸ್ಥಿತವಾಗಿರಬೇಕು. ಎಲ್ಲಾ ಕಡತಗಳು ಜೋಪಾನವಾಗಿ ಉಳಿಯಬೇಕು. ಎಲ್ಲರಿಗೂ ಇದರ ಪ್ರಯೋಜನವಾಗಬೇಕು ಎಂದು ತಿಳಿಸಿದರು.ಸಾರ್ವಜನಿಕರು ಒಂದು ಪತ್ರಕ್ಕಾಗಿ ಹತ್ತಾರು ವರ್ಷ ಕಚೇರಿಗೆ ಅಲೆದಾಡಬೇಕಾಗಿತ್ತು. ಕೆಲವು ನಕಲಿ ದಾಖಲೆಗಳಾಗಿರುವುದು ಹಾಗೂ ಕೆಲವು ಕಳವಾಗಿರುವುದು, ದಾಖಲೆಗಳಿಗಾಗಿ ಕೋರ್ಟು, ಕಚೇರಿಗಳಿಗೆ ಅಲೆದಾಡುವುದು ಕಂಡುಬಂದ ಹಿನ್ನೆಲೆಯಲ್ಲಿ ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜು, ತಾಲೂಕು ಅಧ್ಯಕ್ಷ ರಾಜು, ಉಪವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ತೇಜಸ್ವಿನಿ ಮತ್ತಿತರರು ಉಪಸ್ಥಿತರಿದ್ದರು.ಬಾಕ್ಸ್.............
ಮೈಕ್ರೋ ಫೈನಾನ್ಸ್‌ಗಳನ್ನು ದೂರವಿಡಿರಾಮನಗರ: ಸಾಲದ ಹೆಸರಿನಲ್ಲಿ ಬಡ ಜನರಿಗೆ ಮೋಸ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಗಳಿಗೆ ಅಂತ್ಯ ಕಾಣಿಸಬೇಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಅನಾವಶ್ಯಕವಾಗಿ ಸಂಘಗಳನ್ನು ಮಾಡಿಕೊಂಡು ಸಾಲ ಮಾಡಬಾರದು. ಬಿಡಿಸಿಸಿ ಬ್ಯಾಂಕ್‌ನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮೈಕ್ರೋ ಫೈನಾನ್ಸ್‌ಗಳನ್ನು ದೂರವಿಡಬೇಕು. ದುಡಿದ ಹಣವನ್ನು ಮೈಕ್ರೋ ಫೈನಾನ್ಸ್‌ಗೆ ಬಡ್ಡಿಕಟ್ಟಿ ಹಾಳು ಮಾಡಿಕೊಳ್ಳುವುದು ಬೇಡ. ಮೈಕ್ರೋ ಫೈನಾನ್ಸ್ ಯಾವುದೇ ಆರ್‌ಬಿಐ ನಿಯಮಗಳನ್ನು ಅನುಸರಿಸುವುದಿಲ್ಲ.ಫೈನಾನ್ಸ್‌ಗಳಿಗೂ ಆರ್‌ಬಿಐಗೂ ಯಾವುದೇ ಸಂಬಂಧವಿಲ್ಲ. ದೇವರ ಹೆಸರಿಟ್ಟುಕೊಂಡು ಜನರಿಗೆ ಮೋಸ ಮಾಡುತ್ತಿರುವ ಮೈಕ್ರೋ ಫೈನಾನ್ಸ್‌ಗಳಿಂದ ನಾಗರಿಕರು ಎಚ್ಚರದಿಂದಿರಬೇಕು ಎಂದರು.
ಬಾಕ್ಸ್.......ಯಾವ ಚೇರೂ ಖಾಲಿ ಇಲ್ಲ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೇನ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ. ಯಾರೂ ಈ ಬಗ್ಗೆ ಮಾತನಾಡಬಾರದೆಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ಯಾವ ಬದಲಾವಣೆಯೂ ಇಲ್ಲ, ಯಾವ ಚೇರು ಕೂಡ ಖಾಲಿ ಇಲ್ಲ. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಉಮ್ಮಸ್ಸಿಗಾಗಿ ಡಿ.ಕೆ. ಶಿವಕುಮಾರ್ ಹೋರಾಟ ಮಾಡುತ್ತಿದ್ದಾರೆ. ಸಮಯ ಬಂದಾಗ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತದೆ ಎಂದು ಉತ್ತರಿಸಿದರು. ಡಿಕೆಶಿ ಸಿಎಂ ಎಂಬ ಘೋಷಣೆ ಕೂಗು ಎದ್ದಿದೆಯಲ್ಲ ಎಂಬ ಪ್ರಶ್ನೆಗೆ ಅವರವರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ ಅಷ್ಟೇ ಎಂದರು.22ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ತಾಲೂಕು ಕಚೇರಿಯ ಅಭಿಲೇಖಾಲಯ ಶಾಖೆಯಲ್ಲಿ ಆಯೋಜಿಸಲಾಗಿದ್ದ ಕಂದಾಯ ಇಲಾಖೆಯ ಮಹಾತ್ವಕಾಂಕ್ಷೆಯ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.----------------------------------------