ಪ್ರಸ್ತುತ ಎಲ್ಲಾ ಕ್ಷೇತ್ರಕ್ಕೂ ಕಂಪ್ಯೂಟರ್ ಅತಿ ಅವಶ್ಯ: ಕಲ್ಪನ ಸಲಹೆ

| Published : Jun 09 2024, 01:31 AM IST

ಪ್ರಸ್ತುತ ಎಲ್ಲಾ ಕ್ಷೇತ್ರಕ್ಕೂ ಕಂಪ್ಯೂಟರ್ ಅತಿ ಅವಶ್ಯ: ಕಲ್ಪನ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪ್ರಸ್ತುತ ಎಲ್ಲಾ ಕ್ಷೇತ್ರಕ್ಕೂ ಕಂಪ್ಯೂಟರ್ ಅವಶ್ಯಕತೆ ಇರುವುದರಿಂದ ಪ್ರತಿಯೊಬ್ಬರೂ ಕಂಪ್ಯೂಟರ್ ಕಲಿಯಬೇಕು ಎಂದು ರಾಜ್ಯ ಪಾರಂಪರಿಕ ವೈದ್ಯರ ಕೌನ್ಸಿಲ್ ಅಧ್ಯಕ್ಷೆ ಕಲ್ಪನಾ ಸಲಹೆ ನೀಡಿದರು.

- ಎಕ್ಸೀಲ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಟೈಲರಿಂಗ್ । ಕಂಪ್ಯೂಟರ್ ತರಬೇತಿ ಪಡೆದವರಿಗೆ ಸರ್ಟಿಫಿಕೇಟ್ ವಿತರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರಸ್ತುತ ಎಲ್ಲಾ ಕ್ಷೇತ್ರಕ್ಕೂ ಕಂಪ್ಯೂಟರ್ ಅವಶ್ಯಕತೆ ಇರುವುದರಿಂದ ಪ್ರತಿಯೊಬ್ಬರೂ ಕಂಪ್ಯೂಟರ್ ಕಲಿಯಬೇಕು ಎಂದು ರಾಜ್ಯ ಪಾರಂಪರಿಕ ವೈದ್ಯರ ಕೌನ್ಸಿಲ್ ಅಧ್ಯಕ್ಷೆ ಕಲ್ಪನಾ ಸಲಹೆ ನೀಡಿದರು.

ಶನಿವಾರ ಪಟ್ಟಣದ ಎಕ್ಸೀಲ್ ಕಂಪ್ಯೂಟರ್ ಸಭಾಂಗಣದಲ್ಲಿ ಚೈತನ್ಯ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ಕಂಪ್ಯೂಟರ್ ಹಾಗೂ ಟೈಲರಿಂಗ್ ನ ಕೌಶಲ್ಯ ತರಬೇತಿ ಪಡೆದ 60 ಮಹಿಳೆಯರಿಗೆ ಸರ್ಟಿಫಿಕೇಟ್ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಟೈಲರಿಂಗ್ ಕಲಿತರೆ ಮುಂದೆ ಮನೆಯಲ್ಲೇ ಕುಳಿತು ಉದ್ಯೋಗ ಮಾಡಬಹುದು. ಟೈಲರಿಂಗ್ ನಲ್ಲೂ ಗ್ಲಾಸ್ ವರ್ಕ್, ಪೇಂಟಿಂಗ್, ಎಂಬ್ರಾಯಡರಿ ಡಿಸೈನ್ ಮಾಡಬಹುದು. ಅವಕಾಶ ಸಿಕ್ಕಾಗ ಮಹಿಳೆಯರು ತರಬೇತಿ ಪಡೆದುಕೊಂಡರೆ ಜೀವನದಲ್ಲಿ ಮುಂದೆ ಬರ ಬಹುದು. ಈಗ ಉದ್ಯೋಗ ಸಿಗುವುದು ಕಷ್ಟವಾಗಿದ್ದರಿಂದ ಮುಂದೆ ಸ್ವಯಂ ಉದ್ಯೋಗಕ್ಕೆ ಉತ್ತಮ ಭವಿಷ್ಯವಿದೆ. 20 ವರ್ಷದ ಒಳಗಿನವರಿಗೆ ಕಲಿಯುವುದು ಬಹಳ ಸುಲಭವಾಗಲಿದೆ ಎಂದರು. ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ತರಬೇತಿ ಪಡೆದವರಿಗೆ ಸರ್ಟಿಫಿಕೇಟ್ ವಿತರಿಸಿ ಮಾತನಾಡಿ, ಅನೇಕ ಯುವಕ, ಯುವತಿಯರಿಗೆ ತಾವು ಇಷ್ಟಪಟ್ಟ ಉದ್ಯೋಗಕ್ಕೆ ಹೋಗಲು ಕಾರಣಾಂತರ ದಿಂದ ಸಾದ್ಯವಾಗುವುದಿಲ್ಲ. ಅಂತವರು ಉದ್ಯೋಗದ ಜೊತೆಯಲ್ಲೇ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿ ಕೊಳ್ಳಬೇಕು. ಅನೇಕರು ವೃತ್ತಿ ಜೊತೆಯಲ್ಲೇ ಪ್ರವೃತ್ತಿಯಲ್ಲೂ ಹೆಸರು ಮಾಡಿದ್ದಾರೆ. ಯುವಜನರು ಪ್ರತಿ ನಿತ್ಯ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದವರು ಎಂದು ಯಾವುದೇ ಹಿಂಜರಿಕೆ ಮಾಡಿಕೊಳ್ಳದೆ ಜೀವನದಲ್ಲಿ ದೊಡ್ಡ, ದೊಡ್ಡ ಕನಸು ಕಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಎಕ್ಸೀಲ್ ಕಂಪ್ಯೂಟರ್ ನ ವ್ಯವಸ್ಥಾಪಕ ವರ್ಕಾಟೆ ಸುಧಾಕರ್ ಮಾತನಾಡಿ, ಕಳೆದ 5 ವರ್ಷದಿಂದ ಆಸಕ್ತ ಮಹಿಳೆಯರಿಗೆ ಪ್ರತಿವರ್ಷ ಉಚಿತವಾಗಿ 400 ಗಂಟೆ ಟೈಲರಿಂಗ್ ಹಾಗೂ ಕಂಪ್ಯೂಟರ್ ಕೌಶಲ್ಯ ತರಬೇತಿ ನೀಡುತ್ತಿದ್ದೇವೆ. ತರಬೇತಿ ಪಡೆದ ಮಹಿಳೆಯರಿಗೆ ಸರ್ಕಾರದಲ್ಲಿ ಉದ್ಯೋಗ ಅವಕಾಶವಿದೆ. ಸ್ವಯಂ ಉದ್ಯೋಗ ಸಹ ಮಾಡಬಹುದು. ಟೈಲರಿಂಗ್ ಹಾಗೂ ಕಂಪ್ಯೂಟರ್ ಶಿಕ್ಷಕಿಯರು ಚೆನ್ನಾಗಿ ತರಬೇತಿ ನೀಡುತ್ತಿದ್ದಾರೆ ಎಂದರು.

ಸಭೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯರಾದ ಶೃತಿ ಸುಧಾಕರ್, ಪ್ರಥ್ವಿ ಟೈಲರಿಂಗ್ ಶಿಕ್ಷಕಿ ಸಹನಾಶ್ ಇದ್ದರು.