ಜಿದ್ದಾಜಿದ್ದಿ ಕಣವಾದ ಕೋಮುಲ್‌ ಒಕ್ಕೂಟ ಚುನಾವಣೆ

| Published : Apr 22 2025, 01:54 AM IST

ಸಾರಾಂಶ

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಮುಲ್ ಪ್ರವೇಶ ಮಾಡಲು ಬೂದಿಕೋಟೆಯ ನಲ್ಲಹಳ್ಳಿ ಹಾಲು ಒಕ್ಕೂಟದಿಂದ ಡೆಲಿಗೇಷನ್ ಪಡೆದಿದ್ದಾರೆ, ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಶಾಸಕ ನಾರಾಯಣಸ್ವಾಮಿ ಮತ್ತು ಕೆ.ವೈ.ನಂಜೇಗೌಡ ಒಂದೇ ಪಕ್ಷದ ಶಾಸಕರಾಗಿದ್ದರೂ, ಕೋಚಿಮುಲ್‌ ಹಗರಣಗಳನ್ನು ಬಯಲಿಗೆಳೆಯಲು ನಾರಾಯಣಸ್ವಾಮಿ ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ ಕೋಲಾರ ಹಾಲು ಒಕ್ಕೂಟಕ್ಕೆ ಜೂ.೨೫ ರಂದು ನಡೆಯುವ ಚುನಾವಣೆ ಪ್ರತಿಷ್ಠಿತ ಕಣವಾಗಿದೆ. ಘಟಾಣಿಘಟಿ ರಾಜಕಾರಣಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಾಗವಾದ ನಂತರ ಕೋಲಾರ ಜಿಲ್ಲೆಗೆ ಸೀಮಿತವಾಗಿರುವ ಕೋಮುಲ್‌ಗೆ ೧೩ ಕ್ಷೇತ್ರಗಳನ್ನಾಗಿ ವಿಂಗಡಣೆ ಮಾಡಿದ್ದಾರೆ, ೨ ಕ್ಷೇತ್ರಗಳಲ್ಲಿ ಮಹಿಳಾ ಹಾಲು ಒಕ್ಕೂಟಗಳಿಂದ ಆಯ್ಕೆ ಆಗುವುದಕ್ಕೆ ಮೀಸಲಿಟ್ಟಿದ್ದಾರೆ. ಉಳಿದ ೧೧ ಕ್ಷೇತ್ರಗಳಲ್ಲಿ ಕೆ.ಜಿ.ಎಫ್ ಮತ್ತು ಬಂಗಾರಪೇಟೆಗೆ ತಲಾ ೧ ಸ್ಥಾನ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು ತಲಾ ೨ ಸ್ಥಾನ, ಕೋಲಾರಕ್ಕೆ ೩ ಸ್ಥಾನಗಳನ್ನು ನೀಡಿದ್ದಾರೆ. ಕೆಎಂಎಫ್ ಮೇಲೆ ನಂಜೇಗೌಡ ಕಣ್ಣು

ಈಗಾಗಲೇ ಸ್ಥಳೀಯ ಹಾಲು ಒಕ್ಕೂಟದಿಂದ ಚುನಾವಣೆಗೆ ಮತ ಚಲಾವಣೆ ಮಾಡಲು ಡೆಲಿಗೇಷನ್‌ಗಳನ್ನು ಸ್ಥಳೀಯ ಹಾಲು ಒಕ್ಕೂಟಗಳಿಂದ ನಿರ್ದೇಶಕರು ಪಡೆದುಕೊಂಡಿದ್ದಾರೆ. ಕಳೆದ ೫ ವರ್ಷದಿಂದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ನಿರ್ದೇಶಕರಾಗಿ ಕೋಚಿಮುಲ್ ಅಧ್ಯಕ್ಷರಾಗಿದ್ದರು, ಕೋಚಿಮುಲ್ ವಿಂಗಡಣೆಯಾದ ನಂತರ ಕೋಮುಲ್‌ನಿಂದ ಮಾಲೂರಿನಿಂದ ಸ್ಪರ್ಧೆ ಮಾಡಲು ಮುಂದಾಗಿದ್ದರು, ಕೋಮುಲ್‌ನಿಂದ ನಿರ್ದೇಶಕರಾಗಿ ಆಯ್ಕೆ ಆಗಿ ಕೆ.ಎಂ.ಎಫ್.ಗೆ ನಿರ್ದೇಶಕರಾಗಿ ಹೋಗಿ ಕೆ.ಎಂ.ಎಫ್.ಅಧ್ಯಕ್ಷರಾಗಲು ಚಿಂತನೆ ನಡೆಸಿದ್ದಾರೆ.

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈ ಬಾರಿ ಕೋಮುಲ್ ಪ್ರವೇಶ ಮಾಡಲು ಬೂದಿಕೋಟೆಯ ನಲ್ಲಹಳ್ಳಿ ಹಾಲು ಒಕ್ಕೂಟದಿಂದ ಡೆಲಿಗೇಷನ್ ಪಡೆದಿದ್ದಾರೆ, ಜೂ.೨೫ ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಶಾಸಕ ನಾರಾಯಣಸ್ವಾಮಿ ಮತ್ತು ಕೆ.ವೈ.ನಂಜೇಗೌಡ ಒಂದೇ ಪಕ್ಷದ ಶಾಸಕರಾಗಿದ್ದರೂ, ಕೋಚಿಮುಲ್‌ನಲ್ಲಿ ನಡೆದಿರುವ ಹಗರಣಗಳನ್ನು ಬಯಲಿಗೆಳೆಯಬೇಕೆಂದು ನಾರಾಯಣಸ್ವಾಮಿ ಬಹಿರಂಗವಾಗಿ ಪಟ್ಟು ಹಿಡಿದಿದ್ದಾರೆ.

ಕೋಚಿಮುಲ್‌ನಲ್ಲಿ ನಾನಾ ಹಗರಣ

ಕಳೆದ ೫ ವರ್ಷದಿಂದ ಕೋಚಿಮುಲ್‌ನ್ನು ಬಹಳಷ್ಟು ಹಗರಣಗಳು ನಡೆದಿವೆ ಎಂದು ಆರೋಪಿಸುತ್ತಿದ್ದಾರಲ್ಲದೆ ಬಹಿರಂಗವಾಗಿ ಕೋಚಿಮುಲ್ ಅಧ್ಯಕ್ಷರಾಗಿದ್ದ ಕೆ.ವೈ.ನಂಜೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ಷೇತ್ರ ವಿಂಗಡಣೆ ಸೇರಿದಂತೆ ಕೋಚಿಮುಲ್‌ನಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆದಿಲ್ಲ ತನಿಖೆಯಾಗಬೇಕೆಂಬ ಪಟ್ಟನ್ನೂ ಸಹ ಎಸ್.ಎನ್.ನಾರಾಯಣಸ್ವಾಮಿ ಹಿಡಿದ್ದಾರೆ.

ಈ ಮಧ್ಯೆ ಚುನಾವಣೆ ನಿಗದಿಯಾದ ನಂತರವೂ ಎಸ್.ಎನ್. ಆರೋಪಗಳು ಕೇಳಿ ಬರುತ್ತಿವೆ. ಚುನಾವಣೆಗೆ ಕೋಮುಲ್ ಆಡಳಿತಾಧಿಕಾರಿ ಸಿದ್ಧತೆ ನಡೆಸುತ್ತಿದ್ದು, ಡೆಲಿಗೇಷನ್ ಮುಗಿದ ನಂತರ ಆಯಾ ತಾಲೂಕುಗಳಲ್ಲಿ ಡೆಲಿಗೇಷನ್ ಪರಿಶೀಲನೆ ನಡೆಸಿದ ನಂತರ ಮತದಾರರ ಪಟ್ಟಿ ತಯಾರಿಸಲು ಮುಂದಾಗುತ್ತಾರೆ.

ಡೆಲಿಗೇಷನ್ ಪಡೆದರೆ ಮಾತ್ರ ಸ್ಪರ್ಧೆ

ಕೋಮುಲ್ ನಿರ್ದೇಶಕಕರ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕಾದರೆ ಸ್ಥಳೀಯ ಹಾಲು ಒಕ್ಕೂಟಗಳಿಂದ ಡೆಲಿಗೇಷನ್ ಪಡೆದವರಿಗೆ ಮಾತ್ರ ಅವಕಾಶ ಇದೆ. ಎಸ್.ಎನ್.ನಾರಾಯಣಸ್ವಾಮಿ ಸ್ಪರ್ಧೆ ಮಾಡಲು ತೀರ್ಮಾನಿಸಿ ಬೂದಿಕೋಟೆಯವರನ್ನು ನಲ್ಲಹಳ್ಳಿ ಹಾಲು ಒಕ್ಕೂಟದಿಂದ ಡೆಲಿಗೇಷನ್ ಪಡೆದಿದ್ದಾರೆ. ಚುನಾವಣೆಯು ಜಿದ್ದಾಜಿದ್ದಿ:

ಕಳೆದ ಬಾರಿ ನಿರ್ದೇಶಕರಾಗಿದ್ದವರು ಮತ್ತೆ ನಿರ್ದೇಶಕರಾಗಲು ಚುನಾವಣೆಗೆ ತಯಾರಾಗಿದ್ದಾರೆ. ಕಳೆದ ೫ ವರ್ಷದ ಹಿಂದೆ ಒಂದೊಂದು ತಾಲೂಕಿಗೆ ಒಬ್ಬೊಬ್ಬರು ಮಾತ್ರ ನಿರ್ದೇಶಕರಾಗಿ ಆಯ್ಕೆ ಆಗಲು ಅವಕಾಶವಿತ್ತು. ಈ ಬಾರಿ ಕೋಚಿಮುಲ್ ವಿಂಗಡಣೆಯಾದ ನಂತರ ನಿರ್ದೇಶಕರ ಸಂಖ್ಯೆ ಹೆಚ್ಚಾದ ಕಾರಣ ಕೆಲವು ತಾಲ್ಲೂಕುಗಳಲ್ಲಿ ಇಬ್ಬರು ನಿರ್ದೇಶಕರಾಗಿ ಆಯ್ಕೆ ಆಗಲು ಅವಕಾಶವಿದೆ. ಕೋಲಾರದಲ್ಲಿ ೩ ನಿರ್ದೇಶಕರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಈಗಾಗಲೇ ಚುನಾವಣಾ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿ ಜಿದ್ದಾಜಿದ್ದಿ ಕಣ

ಹೊಸದಾಗಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಮುಲ್‌ಗೆ ಎಂಟ್ರಿಯಾಗಲು ಸಿದ್ಧತೆಯಾಗುತ್ತಿರುವುದರಿಂದ ಜಿದ್ದಾಜಿದ್ದಿಯಾಗುವ ಸಾಧ್ಯತೆ ಇವೆ. ಕೋಲಾರ ತಾಲ್ಲೂಕಿನಲ್ಲಿ ೩ ಕ್ಷೇತ್ರಗಳಾಗಿ ಮಾಡಿರುವುದರಿಂದ ಘಟಾನುಘಟಿ ರಾಜಕಾರಣಿಗಳು ಪ್ರವೇಶ ಮಾಡಲು ಸಾಧ್ಯತೆಗಳಿವೆ. ಈಗಾಗಲೇ ಸ್ಪರ್ಧೆ ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಕ್ಷೇತ್ರ ವಿಗಡಣೆ ಪಾರದರ್ಶಕವಿಲ್ಲ;ಕೋರ್ಟ್ ಮೊರೆ:

ಕ್ಷೇತ್ರ ವಿಂಗಡಣೆಯಲ್ಲಿ ಪಾರದರ್ಶಕವಾಗಿ ನಡೆದಿಲ್ಲ ಎಂದು ಕೆಲವರು ನ್ಯಾಯಾಲಯಕ್ಕೆ ಮೊರೆ ಹೋಗಿರುವುದರಿಂದ ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿರುವುದರಿಂದ ಆ ದಿನಾಂಕದಂದು ಚುನಾವಣೆ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನವೂ ಮೂಡಿದೆ. ಆದರೆ ಚುನಾವಣೆ ನಡೆಸಲು ಕೋಮುಲ್ ಸಿದ್ಧತೆಗಳನ್ನು ನಡೆಸುತ್ತಿದೆ.