ಸಾರಾಂಶ
ಶಿರಹಟ್ಟಿ: ಇಂದಿನ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಎದ್ದು ಕಾಣುತ್ತಿದ್ದು, ಓದಲು ಕುಳಿತಾಗ ಏಕಾಗ್ರತೆ ಇಲ್ಲದೇ ಓದಿದ್ದು ಅರ್ಥವಾಗುವುದಿಲ್ಲ. ಅರ್ಥವಾಗಿದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆ ಹೆಚ್ಚಿಸಿಕೊಂಡು ವ್ಯವಸ್ಥಿತವಾಗಿ ಓದುವ ಮೂಲಕ ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಸುಧಾರಿಸಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಹಾಗೂ ಉಪನ್ಯಾಸಕರಾದ ಶ್ರೀಶೈಲ ಹೇಳಿದರು. ಪಟ್ಟಣದ ಎಫ್.ಎಮ್. ಡಬಾಲಿ ಪದವಿಪೂರ್ವ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಅತಿ ಮುಖ್ಯ. ಅದರಲ್ಲೂ ವಿಶೇಷವಾಗಿ ಪದವಿಪೂರ್ವ ಹಂತದ ಮಕ್ಕಳು ಹೆಚ್ಚು ಏಕಾಗ್ರತೆಯಿಂದ, ಆಸಕ್ತಿಯಿಂದ ಅಧ್ಯಯನದಲ್ಲಿ ತೊಡಗಿದರೆ ಕಲಿಕಾ ಸಾಮರ್ಥ್ಯ ಹೆಚ್ಚಾಗುವುದು ಎಂದರು. ಕಲಿಕೆಯಲ್ಲಿ ಹಲವು ರೀತಿಯ ಮನೋವೈಜ್ಞಾನಿಕ ಅಡೆತಡೆಗಳು ಬರುವುದು ಸಹಜ. ಆದರೆ ಅವುಗಳನ್ನು ದಿಟ್ಟತನದಿಂದ ಎದುರಿಸುವ ಆತ್ಮವಿಶ್ವಾಸ ಮಕ್ಕಳಲ್ಲಿ ಬರಬೇಕು. ಬಾಹ್ಯ ಅಭಿಪ್ರೇರಣೆಗಿಂತ ವಿದ್ಯಾರ್ಥಿಗಳಿಗೆ ಇಂದು ಆಂತರಿಕ ಅಭಿಪ್ರೇರಣೆ ಅವಶ್ಯವಾಗಿದೆ. ಸತತ ಅಧ್ಯಯನಶೀಲತೆಯಿಂದ ಪಂಚೇಂದ್ರಿಯಗಳ ನಿಯಂತ್ರಣದಿಂದ ಕಲಿಕೆ ಸಾಗಬೇಕು ಅಂದಾಗ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಮನೋ ವಿಶ್ಲೇಷಣಾತ್ಮಕ ಉಪನ್ಯಾಸವನ್ನು ನೀಡಿದರು.ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಉಜ್ವಲ ಬದುಕು ನಿಮ್ಮದಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ದಿಷ್ಟ ಗುರಿ ಹೊಂದುವುದರ ಮೂಲಕ ಓದಿನ ಕಡೆ ಹೆಚ್ಚಿನ ಆಸಕ್ತಿ ವಹಿಸಿ ಭವಿಷ್ಯದ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸಮಯಕ್ಕೆ ಮಹತ್ವ ನೀಡಿ ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಕಲಿತ ಶಾಲೆ ಕಾಲೇಜಿಗೆ ಕೀರ್ತಿ ತರಬೇಕು ಎಂದರು. ದೃಢ ನಿರ್ಧಾರ ಮತ್ತು ಓದಿನಲ್ಲಿ ಏಕಾಗ್ರತೆ ಇದ್ದರೆ ಮಾತ್ರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ತಪಸ್ಸಿಗೆ ಕುಳಿತವರಂತೆ ಏಕಾಗ್ರತೆಯಿಂದ ಓದುವ ಆಸಕ್ತಿ ಇರಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯಕ್ತಿತ್ವದ ಅನಾವರಣಗೊಳಿಸಬೇಕು. ಇಂತಹ ವಿಶೇಷ ಉಪನ್ಯಾಸ ಮಾಲಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ಶಿಸ್ತುಬದ್ಧ ಅಧ್ಯಯನ ಸತತ ಪರಿಶ್ರಮದಿಂದ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯ ಎಂದು ತಿಳಿಸಿದರು. ಮುಖ್ಯವಾಗಿ ಸಾಧಿಸಬೇಕೆಂಬ ಛಲ ವಿದ್ಯಾರ್ಥಿಗಳಲ್ಲಿದ್ದರೆ ಸಾಧನೆ ಮಾಡಬಹುದು. ಕಷ್ಟಪಟ್ಟು ಅಭ್ಯಾಸ ಮಾಡದೇ ಇಷ್ಟಪಟ್ಟು ಅಭ್ಯಾಸ ಮಾಡಬೇಕು. ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಗುರಿ ಮುಟ್ಟಬೇಕು. ಶಿಕ್ಷಣ ರಂಗದಲ್ಲಿ ದಿನೇ ದಿನೇ ಪೈಪೋಟಿ ನಡೆಯುತ್ತಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರು, ಪೋಷಕರು ಸಮಯ ಮೀಸಲಿಡಬೇಕು ಎಂದರು. ಕಲಿತ ಜ್ಞಾನ ಸದ್ಬಳಕೆ ಮಾಡಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಬೇರೆ ಕಡೆ ಆಕರ್ಷಣೆಗೆ ಒಳಗಾಗದಂತೆ ತಂದೆ ತಾಯಿಗಳು ಮಕ್ಕಳನ್ನು ಬೆಳೆಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳ ಬುದ್ಧಿಮಟ್ಟ ಅತ್ಯುನ್ನತವಾಗಿದ್ದು, ಎಲ್ಲವನ್ನೂ ತಿಳಿದುಕೊಳ್ಳುವ ಹುಮ್ಮಸ್ಸು ಇರುತ್ತದೆ. ಇಂಥವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸುವುದು, ಕಲಿಕೆಗೆ ಪ್ರೋತ್ಸಾಹ ನೀಡುವ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಬಾರದು. ನಿಮ್ಮ ಭವಿಷ್ಯ ನೀವೇ ರೂಪಿಸಿಕೊಳ್ಳಬೇಕು. ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತಾಗ ಮಾತ್ರ ಜೀವನ ಬಂಗಾರವಾಗುತ್ತದೆ. ತಂದೆ-ತಾಯಿಗಳು ನಿಮ್ಮ ಮೇಲೆ ಬಹಳ ನೀರಿಕ್ಷೆ ಇಟ್ಟುಕೊಂಡಿರುತ್ತಾರೆ. ಅದನ್ನು ಈಡೇರಿಸಬೇಕಾದರೆ ಸದಾ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಒಳ್ಳೆಯ ನಾಗರಿಕರಾಗಿ ರೂಪುಗೊಂಡು ಸಮಾಜದ ಕೀರ್ತಿ ಹೆಚ್ಚಿಸುವ ಕೆಸಲ ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುಧಾ ಹುಚ್ಚಣ್ಣವರ, ಪಿ.ಎನ್. ಕುಲಕರ್ಣಿ, ಎಂ.ಎ. ನದಾಫ್, ವೈ.ಎಸ್. ಪಂಗಣ್ಣವರ್, ಎನ್. ಹನುಮರಡ್ಡಿ, ಎಫ್.ಎ. ಬಾಬು ಖಾನವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕ ಬಸವರಾಜ್ ಶಿರುಂದ ಸ್ವಾಗತಿಸಿ, ನಿರೂಪಿಸಿದರು.