ಸಾರಾಂಶ
ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯ ಭೀಕರ ಕೊಲೆಯ ಬಗ್ಗೆ ಮುಖ್ಯಮಂತ್ರಿಗಳು, ಇದು ವೈಯುಕ್ತಿಕ ಕಾರಣಕ್ಕಾಗಿ ನಡೆದ ಕೊಲೆ ಎಂದಿರುವುದು, ಗೃಹ ಸಚಿವರು ಇದು ಲವ್ ಜಿಹಾದ್ ಅಲ್ಲ, ಲವ್ ಅಷ್ಟೇ ಎಂದಿರುವುದು ಈಗಲೇ ಆರೋಪಿಯನ್ನು ರಕ್ಷಿಸುವ ಹುನ್ನಾರವಾಗಿದೆ ಎಂದು ಶಾಸಕ ಕಾಮತ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ನೇಹಾ ಹೀರೇಮಠ್ ಎಂಬ ವಿದ್ಯಾರ್ಥಿನಿಯನ್ನು ಫಯಾಜ್ ಎನ್ನುವ ವ್ಯಕ್ತಿ ಹಾಡಹಗಲೇ ಚೂರಿಯಿಂದ ಇರಿದು ಅತ್ಯಂತ ಭೀಕರವಾಗಿ ಕೊಲೆ ಮಾಡಿರುವುದು ರಾಜ್ಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಸೃಷ್ಟಿಸಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯ ಭೀಕರ ಕೊಲೆಯ ಬಗ್ಗೆ ಮುಖ್ಯಮಂತ್ರಿಗಳು, ಇದು ವೈಯುಕ್ತಿಕ ಕಾರಣಕ್ಕಾಗಿ ನಡೆದ ಕೊಲೆ ಎಂದಿರುವುದು, ಗೃಹ ಸಚಿವರು ಇದು ಲವ್ ಜಿಹಾದ್ ಅಲ್ಲ, ಲವ್ ಅಷ್ಟೇ ಎಂದಿರುವುದು ಈಗಲೇ ಆರೋಪಿಯನ್ನು ರಕ್ಷಿಸುವ ಹುನ್ನಾರವಾಗಿದೆ. ಕೊಲೆಯಾದ ನೇಹಾ ತಂದೆ ನಿರಂಜನ್ ಅವರೇ ಇದು ಯಾವುದೇ ವೈಯಕ್ತಿಕ ಕಾರಣಕ್ಕೆ ಆದ ಕೊಲೆಯಲ್ಲ, ಇದೊಂದು ಲವ್ ಜಿಹಾದ್ ಪ್ರಕರಣವೇ ಎಂದು ಸ್ಪಷ್ಟವಾಗಿ ಹೇಳಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದು ಕಾಂಗ್ರೆಸ್ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.
ಅಂದು ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಎಂಬ ಕಾಂಗ್ರೆಸ್ ಶಾಸಕನ ಮನೆಯನ್ನು ಸುಟ್ಟು ಹಾಕಿದ್ದರೂ ಕಾಂಗ್ರೆಸ್ ನಾಯಕರು ಜಿಹಾದಿಗಳ ಬೆಂಬಲಕ್ಕೆ ನಿಂತಿದ್ದರು. ಇಂದು ಕಾಂಗ್ರೆಸ್ ಕಾರ್ಪೊರೇಟರ್ ಮಗಳನ್ನ ಅದೇ ಜಿಹಾದಿ ಮನಸ್ಥಿತಿಯವರು ಬಲಿ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಜನಪ್ರತಿನಿಧಿಗಳ ಪಾಡೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿಯೇನು? ಯಾವುದೇ ಕಾರಣಕ್ಕೂ ಮುಸ್ಲಿಂ ಓಲೈಕೆಗಾಗಿ ಇಂತಹ ದುರುಳರನ್ನು ಸುಮ್ಮನೆ ಬಿಡಕೂಡದು, ಗಲ್ಲಿಗೇರಿಸಲೇಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.