ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಅಧ್ಯಯನ ಮತ್ತು ಪರಿಶ್ರಮ ಇದ್ದರೆ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದು ನಿವೃತ್ತ ಪ್ರಾಂಶುಪಾಲ, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಹೇಳಿದರು.ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಜ್ಞಾನಾರ್ಜನೆಗಿಂತ ಮನೋರಂಜನೆಯನ್ನು ಚಟವಾಗಿಸಿಕೊಂಡಿದ್ದಾರೆ. ಮೊಬೈಲ್ ಅವರ ಜೀವನದ ಭಾಗವಾಗಿ ಬಿಟ್ಟಿದೆ ಎಂದರು.
ಮೂವತ್ತು ದಶಕಗಳ ಹಿಂದೆ ನಿರುದ್ಯೋಗದ ಸಮಸ್ಯೆ ಇತ್ತು. ಆದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಸೃಷ್ಟಿಸಿಕೊಳ್ಳುವ ಅವಕಾಶವಿದೆ. ಆದರೆ, ಅದಕ್ಕೆ ಸ್ವಸಾಮರ್ಥ್ಯ ಮತ್ತು ಸ್ವನಿರ್ಣಯವಿರಬೇಕು. ಇಂದಿನ ಯುವಜನತೆ ಬದುಕನ್ನು ಆಚರಣೆಯ ರೀತಿಯಲ್ಲಿ ಆಸ್ವಾದಿಸುತ್ತಿದ್ದಾರೆ. ಬದುಕಿನಲ್ಲಿ ಅಭಾವಗಳ ಅನುಭವವಾಗಲಿ ಮತ್ತು ಗಂಭೀರತೆಯಾಗಲಿ ಅವರಿಗಿಲ್ಲ. ಹೀಗಾಗಿ, ಇಂತಹ ಜನಾಂಗವನ್ನು ಉತ್ಪಾದಕ ಜನಾಂಗವಾಗಿ ಬದಲಾಯಿಸುವ ಸವಾಲು ಸಮಾಜಕ್ಕಿದೆ ಎಂದು ಅವರು ತಿಳಿಸಿದರು.ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಲು ಮತ್ತು ಪರಿಪೂರ್ಣತೆಯನ್ನು ಹೊಂದಲು ಮೊದಲು ಅಹಂ ಭಾವವನ್ನು ಬಿಡಬೇಕು. ಸ್ವಯಂ ಮೌಲ್ಯಮಾಪನವನ್ನು ಮಾಡಿಕೊಳ್ಳಬೇಕು. ನೀವು ಮಾಡುವ ಕೆಲಸದ ಸ್ಪಷ್ಟ ಉದ್ದೇಶದ ಅರಿವು ನಿಮಗಿರಬೇಕು ಎಂದು ಅವರು ಹೇಳಿದರು.
ಖೋಖೋ ವಿಶ್ವಕಪ್ ವಿಜೇತರಾದ ಬಿ. ಚೈತ್ರಾ ಮಾತನಾಡಿ, ಎಲ್ಲಾ ಸೌಕರ್ಯಗಳಿದ್ದೂ ಸಾಧಿಸುವುದು ಸಾಧನೆಯಲ್ಲ. ಏನೂ ಸೌಲಭ್ಯವಿಲ್ಲದೇ ಎಲ್ಲಾ ಕೊರತೆಗಳನ್ನು ಮೆಟ್ಟಿ ನಿಂತು ಮಾಡುವುದು ನಿಜವಾದ ಸಾಧನೆ. ಕೇವಲ ಮೊಬೈಲ್ ನಲ್ಲಿ ಮುಳುಗಿ ಸಮಯ ವ್ಯರ್ಥ ಮಾಡದೇ, ನಿರ್ದಿಷ್ಠ ಗುರಿಯನ್ನು ರೂಪಿಸಿಕೊಂಡು ಅದನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ನೀವೆಲ್ಲರೂ ನಿರತರಾಗಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳು ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿವೆ. ಕಲೆ ಮತ್ತು ಸಾಹಿತ್ಯ ಎಲ್ಲಾ ಕಾಲಕ್ಕೂ ಪ್ರಸ್ತುತವಾದದ್ದು. ಆದ್ದರಿಂದ ವಿದ್ಯಾರ್ಥಿಗಳು ಈ ವೇದಿಕೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಕಾಲೇಜುಗಳು ವಿದ್ಯಾರ್ಥಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗದೆ ಮಾನವ ಸಂಪನ್ಮೂಲ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯಗಳಷ್ಟೇ ಪಠ್ಯೇತರ ಚಟುವಟಿಕೆಗಳೂ ಅತ್ಯಾವಶ್ಯಕ. ಬದುಕಿನಲ್ಲಿ ಕನಸು, ಸಾಧಿಸುವ ಛಲ, ಬಯಕೆ ಹಾಗೂ ನಿಶ್ಚಲ ಗುರಿ ಇರಬೇಕು ಎಂದು ಹೇಳಿದರು.ಇದೇ ವೇಳೆ ಖೋಖೋ ವಿಶ್ವಕಪ್ ವಿಜೇತರಾದ ಬಿ. ಚೈತ್ರಾ ಮತ್ತು ಆರ್ ಡಿಸಿ ಮತ್ತು ತಲ್ ಸೈನಿಕ್ ಕ್ಯಾಂಪ್ ನಲ್ಲಿ ಭಾಗವಹಿಸಿದ್ದ ಕಾಲೇಜಿನ ಎನ್ ಸಿಸಿ ವಿದ್ಯಾರ್ಥಿಗಳಾದ ಎಂ.ಎಂ. ಕನ್ನಿಕಾ, ದರ್ಶನ್ ಮತ್ತು ಎ. ಚಂದನ್, ಎನ್‌ಎಸ್‌ಎಸ್ ವಿದ್ಯಾರ್ಥಿಗಳಾದ ಅನನ್ಯ ಮತ್ತು ಆರ್. ಕಿರಣ್ ಅವರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಸಿ.ಆರ್. ಮಧುಸೂದನ್, ಕ್ರೀಡಾ ವೇದಿಕೆ ಸಂಚಾಲಕ ಎಂ. ಕಾರ್ತೀಕ್ ಇದ್ದರು. ಚಿನ್ಮಯಿ ಪ್ರಾರ್ಥಿಸಿದರು. ಟಿ.ಎ. ಐಶ್ವರ್ಯಾ ಸ್ವಾಗತಿಸಿದರು. ಸಿ.ಎಂ. ವಿನಯ್ ವಂದಿಸಿದರು. ಎಸ್. ನಂದಿನಿ ನಿರೂಪಿಸಿದರು.