ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ತೀರ್ಮಾನ: ಜಿಲ್ಲಾಧಿಕಾರಿ ಶಿಲ್ಪಾನಾಗ್

| Published : Oct 23 2024, 12:52 AM IST

ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ತೀರ್ಮಾನ: ಜಿಲ್ಲಾಧಿಕಾರಿ ಶಿಲ್ಪಾನಾಗ್
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರದೊಂದಿಗೆ ನ.1ರಂದು ಜಿಲ್ಲಾ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ನಿರ್ಧಾರ । ಗಡಿ ಭಾಗದ ಪುಣಜನೂರಿನಲ್ಲಿಯೂ ಕನ್ನಡ ಹಬ್ಬ। ಮುಖಂಡರಿಂದ ಸಲಹೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಡಳಿತದ ವತಿಯಿಂದ ಎಲ್ಲರ ಸಹಕಾರದೊಂದಿಗೆ ನ.1ರಂದು ಜಿಲ್ಲಾ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಂಘ ಸಂಸ್ಥೆಗಳು, ಅಧಿಕಾರಿಗಳು, ಇನ್ನಿತರರು ಭಾಗವಹಿಸಿದ್ದ ಸಭೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ವ್ಯಾಪಕವಾಗಿ ಆಚರಿಸುವಂತಾಗಬೇಕು. ಎಲ್ಲಾ ಗ್ರಾಮ ಪಂಚಾಯಿತಿ, ಬ್ಯಾಂಕ್‌ಗಳು ಇನ್ನಿತರೆ ಕಚೇರಿಗಳಲ್ಲಿ ಆಚರಣೆ ಮಾಡಬೇಕು. ವಿವಿಧ ಕ್ಷೇತ್ರಗಳಲ್ಲಿ ದುಡಿದ ಜಿಲ್ಲೆಯ ಕನ್ನಡಿಗರನ್ನು ಗೌರವಿಸಬೇಕು. ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಗಡಿ ಭಾಗಗಳಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಾಡು ಮಾಡಬೇಕು ಎಂದು ಹೇಳಿದರು.

ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಜಿಲ್ಲೆಯಲ್ಲಿ ಪ್ರಧಾನವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕಗಳು ಇರಬೇಕು. ಈ ಬಗ್ಗೆ ಸಾಕಷ್ಟು ಗಮನಸೆಳೆಯಲಾಗಿದೆ. ಕಟ್ಟುನಿಟ್ಟಾಗಿ ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಹಾಕುವಂತೆ ಕ್ರಮ ವಹಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಜಿಲ್ಲೆಯ ಕನ್ನಡಿಗರಿಗೆ ಉದ್ಯೋಗ ದೊರಕಬೇಕು. ಕನ್ನಡ ಜಾಗೃತಿ ಅಭಿಯಾನವನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೈಗೊಳ್ಳಬೇಕು. ಗಡಿ ಜಿಲ್ಲೆಯಲ್ಲಿ ಕನ್ನಡ ಪರ ಹೆಚ್ಚಿನ ಚಟುವಟಿಕೆಗಳು ಕಾರ್ಯಕ್ರಮಗಳು ನಡೆಬೇಕು ಎಂಬುದು ಸೇರಿದಂತೆ ಇನ್ನಿತರ ಹಲವಾರು ಸಲಹೆಗಳನ್ನು ಮುಖಂಡರು ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಕಳೆದ ಬಾರಿ ಎಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದೇವೆ. ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿತ್ತು. ಈ ಬಾರಿಯೂ ಸಹ ಅದ್ಧೂರಿಯಾಗಿ ಹಾಗೂ ವೈವಿಧ್ಯಮಯ ಕಾರ್ಯಕ್ರಮ ಚಟುವಟಿಕೆಗಳ ಮೂಲಕ ಇನ್ನಷ್ಟು ಆಕರ್ಷಣೀಯವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಲಾಗುವುದು. ಸಭೆಯಲ್ಲಿ ನೀಡಿರುವ ಸಲಹೆಗಳನ್ನು ಪರಿಗಣಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿಯೇ ಪ್ರಧಾನವಾಗಿ ನಾಮಫಲಕಗಳನ್ನು ಅಳವಡಿಸಲು ಹಾಗೂ ಕನ್ನಡ ಅನುಷ್ಠಾನದಲ್ಲಿ ಸರ್ಕಾರ ಹೊರಡಿಸಿರುವ ಆದೇಶ, ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ವಹಿಸಬೇಕು. ನಾಮಫಲಕ ಸಂಬಂಧ ನೀಡುವ ಆದೇಶ ಪಾಲನೆ ಮಾಡದ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದು ಮಾಡಬೇಕು. ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಯಾಗಬೇಕು. ಬ್ಯಾಂಕ್‌ಗಳಲ್ಲಿ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಸಹಾಯವಾಣಿ ಡೆಸ್ಕ್‌ನಲ್ಲಿ ಕನ್ನಡ ಭಾಷೆ ಬಲ್ಲವರನ್ನು ನಿಯೋಜಿಸಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳು, ಬ್ಯಾಂಕ್‌ಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನ. 30ರಂದು ಗಡಿ ಭಾಗದ ಪುಣಜನೂರಿನಲ್ಲಿ ಸಹ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು. ಜಿಲ್ಲೆಯನ್ನು ಸಂಪರ್ಕಿಸುವ ಭಾಗಗಳಲ್ಲಿ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸವುಳ್ಳ ಸ್ವಾಗತ ಕಮಾನುಗಳನ್ನು ಅಳವಡಿಸಲು ಕ್ರಮ ವಹಿಸಲಿದ್ದೇವೆ. ಕನ್ನಡ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು ಎಂದರು.

ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು. ಕೌಶಲ್ಯ ಅಗತ್ಯವಿದ್ದರೆ ತರಬೇತಿ ನೀಡಿ ಉದ್ಯೋಗಕ್ಕೆ ನೇಮಿಸಿಕೊಳ್ಳಬೇಕು ಎಂದು ಈಗಾಗಲೇ ಉದ್ಯಮಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿಯೇ ಮತ್ತೊಮ್ಮೆ ಕೈಗಾರಿಕೋದ್ಯಮಿಗಳ ಸಭೆ ಕರೆಯಲಾಗುತ್ತದೆ. ಆ ಸಭೆಗೆ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಗಿರಿಜಾ, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಸುರೇಶ್ ವಾಜಪೇಯಿ, ಚಾ.ಗು.ನಾಗರಾಜು, ಸಿ.ಕೆ. ಮಂಜುನಾಥ್, ಸಿ.ಎಂ.ಕೃಷ್ಣಮೂರ್ತಿ, ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಸೋಮನಾಯಕ, ಜಿ.ಬಂಗಾರು, ಚಾ.ರಾ. ಕುಮಾರ್, ಕಹಳೆ ರವಿಚಂದ್ರ ಪ್ರಸಾದ್, ಪ್ರಶಾಂತ್, ನಾಗೇಶ್, ನಟರಾಜು, ಶಿವಣ್ಣ, ಮಹೇಶ್, ಶಿವು, ಲಿಂಗರಾಜು, ಇತರ ಮುಖಂಡರು ಹಾಜರಿದ್ದರು.