ಹೊಟೇಲ್, ಹೋಂಸ್ಟೇಯಲ್ಲಿ ಕೊಡವ ಸಂಸ್ಕೃತಿ ದುರುಪಯೋಗಕ್ಕೆ ಖಂಡನೆ

| Published : Feb 03 2024, 01:45 AM IST

ಹೊಟೇಲ್, ಹೋಂಸ್ಟೇಯಲ್ಲಿ ಕೊಡವ ಸಂಸ್ಕೃತಿ ದುರುಪಯೋಗಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿಯ ರೆಸಾರ್ಟ್ ಒಂದರಲ್ಲಿ ಅಮೇರಿಕಾದಲ್ಲಿ ಒಂದು ಜನಾಂಗದ ಧರ್ಮಗುರುಗಳನ್ನು ಸ್ವಾಗತಿಸಲು ಇಲ್ಲಿನ ಕಾರ್ಮಿಕರಿಗೆ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆ ಸೇರಿದಂತೆ ಕೊಡವ ಸೀರೆಯನ್ನು ಉಡಿಸಲಾಗಿತ್ತು. ತಲೆಗೆ ವಸ್ತ್ರ ಕಟ್ಟಿಸಿ ಕ್ಯಾಂಡಲ್ ಹಿಡಿದು ತಳಿಯತಕ್ಕಿ ಬೊಳಕ್‌ನೊಂದಿಗೆ ಸ್ವಾಗತಿಸಿದಂತೆ ಸ್ವಾಗತ ಮಾಡಲಾಗಿದೆ ಎಂದು ಆರೋಪಿಸಿರುವ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಈ ಕುರಿತು ಕ್ಷಮೆ ಯಾಚಿಸಲು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡವ ಪದ್ಧತಿ, ಸಂಸ್ಕೃತಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಆಟ್ ಪಾಟ್‌ಗಳನ್ನು ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಸೇರಿದಂತೆ ಹೊಟೇಲ್ ಲಾಡ್ಜ್‌ಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಹಾಗೂ ಖಂಡನೀಯ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕಿಡಿ ಕಾರಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಮಡಿಕೇರಿಯ ರೆಸಾರ್ಟ್ ಒಂದರಲ್ಲಿ ಅಮೇರಿಕಾದಲ್ಲಿ ಒಂದು ಜನಾಂಗದ ಧರ್ಮಗುರುಗಳನ್ನು ಸ್ವಾಗತಿಸಲು ಇಲ್ಲಿನ ಕಾರ್ಮಿಕರಿಗೆ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆ ಸೇರಿದಂತೆ ಕೊಡವ ಸೀರೆಯನ್ನು ಉಡಿಸಲಾಗಿತ್ತು. ತಲೆಗೆ ವಸ್ತ್ರ ಕಟ್ಟಿಸಿ ಕ್ಯಾಂಡಲ್ ಹಿಡಿದು ತಳಿಯತಕ್ಕಿ ಬೊಳಕ್‌ನೊಂದಿಗೆ ಸ್ವಾಗತಿಸಿದಂತೆ ಸ್ವಾಗತ ಮಾಡಿರುವುದು ಖಂಡನೀಯ ಎಂದಿದ್ದಾರೆ. ಜಿಲ್ಲೆಯಲ್ಲಿ ಪದೇಪದೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಈ ಹಿಂದೆ ರೆಸಾರ್ಟ್ ಒಂದರಲ್ಲಿ ಸಪ್ಲಯರ್‌ಗೆ ಕುಪ್ಯ ಚೇಲೆ ಹಾಕಿಸಿ ಅವಮಾನ ಮಾಡಲಾಗಿತ್ತು. ಇದೀಗ ಮತ್ತೆ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ. ಕೂಡಲೇ ಸಂಬಂಧಪಟ್ಟವರು ಜನಾಂಗದ ಕ್ಷಮೆ ಕೋರಬೇಕು. ಉಳಿದ ಹೋಂ ಸ್ಟೇ ರೆಸಾರ್ಟ್ಗಳು ಕೂಡ ಕೊಡವ ಪದ್ದತಿ ಸಂಸ್ಕೃತಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದು ನಿಲ್ಲಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಕೂಡ ಒಂದೊಂದು ದೈವಿಕ ಹಿನ್ನಲೆಗಳಿದ್ದು ಇದನ್ನು ಕಂಡ ಕಂಡಲ್ಲಿ ಪ್ರದರ್ಶನ ಮಾಡುವುದು ಕೂಡ ನಿಲ್ಲಬೇಕಿದೆ. ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರೆದರೆ ಅಂತಹ ಹೋಂ ಸ್ಟೇ ರೆಸಾರ್ಟ್ ಸೇರಿದಂತೆ ಹೊಟೇಲ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಆಯಾಯ ಹೋಂ ಸ್ಟೇ ರೆಸಾರ್ಟ್ ಮಾಲಿಕರೇ ನೇರ ಹೊಣೆಗಾರರಾಗುತ್ತಾರೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದಿದ್ದಾರೆ.

ಈಗಾಗಲೇ ಮುಕ್ತವಾಗಿ ಹಲವಾರು ಬಾರಿ ಹಲವಾರು ವಿಷಯಗಳಲ್ಲಿ ಮನವಿ ಮಾಡಿಕೊಂಡಿದ್ದರೂ ಏನೂ ಪ್ರಯೋಜನ ಆಗಿಲ್ಲ. ಕೂಡಲೇ ಈ ರೆಸಾರ್ಟಿನವರು ಕೊಡವ ಜನಾಂಗದ ಕ್ಷಮೆ ಕೇಳಬೇಕು ಹಾಗೂ ನಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ವ್ಯವಹಾರಕ್ಕಾಗಿ ಬಳಸಿಕೊಳ್ಳುವುದು ನಿಲ್ಲಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.