ಮುಹಮ್ಮದ್‌ರ ಬಗ್ಗೆ ಅವಾಚ್ಯ ಶಬ್ಧ ಬಳಕೆಗೆ ಮಾನ್ವಿಯಲ್ಲಿ ಖಂಡನೆ

| Published : Oct 09 2024, 01:36 AM IST / Updated: Oct 09 2024, 01:37 AM IST

ಸಾರಾಂಶ

ಕೋಮು ಸೌಹಾರ್ದತೆಗೆ ಭಂಗ ಉಂಟುಮಾಡುತ್ತಿರುವ ಯತಿ ನರಸಿಂಗನಂದ ಸರಸ್ವತಿರವರ ಮೇಲೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ

ಕನ್ನಡಪ್ರಭ ವಾರ್ತೆ ಮಾನ್ವಿ

ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಯತಿ ನರಸಿಂಗನಂದ ಸರಸ್ವತಿ ಅವರು ತಮ್ಮ ಭಾಷಣದಲ್ಲಿ ಮುಸ್ಲಿಂ ಸಮುದಾಯದ ಮಹಾನ್ ಪ್ರವಾದಿ ಹಜರತ್ ಮುಹಮ್ಮದ್ ರವರ ಬಗ್ಗೆ ಅವಾಚ್ಯ ಶಬ್ಧ ಬಳಸಿರುವುದನ್ನು ಖಂಡಿಸಿ ಮಾನ್ವಿ ತಾಲೂಕು ಮುಸ್ಲಿಂ ಸಮಾಜ ಸಮಿತಿ ನೇತೃತ್ವದಲ್ಲಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟಿಸಲಾಯಿತು.

ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವ ವೃತ್ತ ಮುಖಾಂತರ ತಹಸೀಲ್ದಾರ್ ಕಚೇರಿವರೆಗೆ ಸಾಗಿ, ಬಳಿಕ ತಹಸೀಲ್ದಾರ್ ರಾಜು ಪಿರಂಗಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮುಸ್ಲಿಂ ಧರ್ಮ ಗುರು ಸೈಯಾದ್ ಸಜ್ಜಾದ್ ಹುಸೇನಿ ಮತವಾಲೇ ಅವರು, ಇಸ್ಲಾಂ ಪ್ರವರ್ತಕರನ್ನು ನಿಂದನೆ ಮಾಡಿರುವುದು ಖಂಡನೀಯ ವಿಷಯವಾಗಿದ್ದು, ಕೂಡಲೇ ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಯತ್ನಿಸುತ್ತಿರುವ ಹಾಗೂ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಭಂಗ ಉಂಟುಮಾಡುತ್ತಿರುವ ಯತಿ ನರಸಿಂಗನಂದ ಸರಸ್ವತಿರವರ ಮೇಲೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಾಜದ ಧರ್ಮ ಗುರುಗಳಾದ ಜನಾಬ್ ಮುಫ್ತಿ ಹಸನ್ ಜಿಶಾನ್ ಖಾದ್ರಿ ಸಾಬ್, ಮುಖಂಡರಾದ ಸೈಯಾದ್ ಅಕ್ಬರ್ ಪಾಷಾ ಸಾಬ್, ಸೈಯಾದ್ ಸಾದೀಖ್ ಪಾಷಸಾಬ್, ಸೈಯಾದ್ ಖಾಲೀದ್ ಖಾದ್ರಿ ಸಾಬ್, ಸೈಯಾದ್ ಸಿರಾಜುದ್ದೀನ್ ಖಾದ್ರಿ ಸೇರಿ ಸಾವಿರಾರು ಮುಸ್ಲಿಂ ಸಮುದಾಯದವರು ಭಾಗವಹಿಸಿದ್ದರು.