ಅಮಿತ್ ಶಾ ಹೇಳಿಕೆಗೆ ಖಂಡನೆ: ಠುಸ್ಸಾಯ್ತು ಮಂಡ್ಯ ಬಂದ್..!

| Published : Jan 08 2025, 12:16 AM IST

ಸಾರಾಂಶ

ಮಂಡ್ಯ ಬಂದ್‌ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳ ಮುಖಂಡರು ಬೈಕ್‌ ರ್‍ಯಾಲಿ ನಡೆಸುತ್ತಾ ನಗರದ ಪ್ರಮುಖ ರಸ್ತೆಗಳ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದರು. ಇದಕ್ಕೆ ಅಂಗಡಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು ಅಂಗಡಿ ಮುಚ್ಚುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಅಂಗಡಿ ಮಾಲೀಕರು ಮತ್ತು ಪ್ರತಿಭಟನಾಕಾರರ ನಡುವೆ ವಾಕ್ಸಮರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೇಂದ್ರ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಲಘುವಾಗಿ ಮಾತನಾಡಿದ್ದಾರೆ, ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಂಪೂರ್ಣ ವಿಫಲವಾಯಿತು.

ಒಂದೆಡೆ ಬಂದ್ ಬೆಂಬಲಿಸುವಂತೆ ವಿವಿಧ ಸಂಘಟನೆಯವರು ಬೈಕ್‌ಗಳ ಮೂಲಕ ವಿವಿಧ ರಸ್ತೆಗಳಲ್ಲಿ ಜಾಥಾ ನಡೆಸಿದರೆ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರೂ ಕೂಡ ಅಂಬೇಡ್ಕರ್ ಭಾವಚಿತ್ರದೊಂದಿಗೆ ವರ್ತಕರಿಗೆ ಹೂ ಕೊಟ್ಟು ಬಂದ್ ಬೆಂಬಲಿಸದಂತೆ ಮನವಿ ಮಾಡಿದರು.

ನಾವು ಅಂಬೇಡ್ಕರ್ ಪರ ಇದ್ದೇವೆ. ಸಂವಿಧಾನ ಯಾರೊಬ್ಬರ ಸ್ವತ್ತಲ್ಲ. ಅದು ಎಲ್ಲರಿಗೆ ಸೇರಿದ್ದು. ಕೇಂದ್ರ ಸಚಿವ ಅಮಿತ್ ಶಾ ಅವರು ಸಂವಿಧಾನಕ್ಕೆ ಯಾವುದೇ ಅಪಮಾನ ಮಾಡಿಲ್ಲ. ಅಂಬೇಡ್‌ಕರ್ ಅವರಿಗೂ ಅಗೌರವ ತೋರಿಲ್ಲ. ಸಂಘಟನೆಗಳವರು ಪೂರ್ವಾಗ್ರಹ ಪೀಡಿತರಾಗಿ ಬಂದ್‌ಗೆ ಪ್ರೇರೇಪಿಸುತ್ತಿದ್ದಾರೆ. ಅನಾವಶ್ಯಕವಾಗಿ ಬಂದ್ ಮಾಡದಂತೆ ವರ್ತಕರಲ್ಲಿ ಮನವಿ ಮಾಡಿದರು.

ಮಂಡ್ಯ ಬಂದ್‌ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳ ಮುಖಂಡರು ಬೈಕ್‌ ರ್‍ಯಾಲಿ ನಡೆಸುತ್ತಾ ನಗರದ ಪ್ರಮುಖ ರಸ್ತೆಗಳ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದರು. ಇದಕ್ಕೆ ಅಂಗಡಿ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು ಅಂಗಡಿ ಮುಚ್ಚುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಅಂಗಡಿ ಮಾಲೀಕರು ಮತ್ತು ಪ್ರತಿಭಟನಾಕಾರರ ನಡುವೆ ವಾಕ್ಸಮರ ನಡೆಯಿತು.

ಬನ್ನೂರು ರಸ್ತೆಯ ಅಂಗಡಿಯೊಂದರ ಬಾಗಿಲು ಮುಚ್ಚಿಸಲು ಯತ್ನಿಸಿದ ವೇಳೆ ಅಂಗಡಿ ಬಂದ್ ಮಾಡಲು ಮಾಲೀಕರು ತಿರಸ್ಕರಿಸಿದರು. ಅಂಗಡಿ ಮುಚ್ಚದಿದ್ದಕ್ಕೆ ಆಕ್ರೋಶಗೊಂಡ ಪ್ರತಿಭಟನಾಕಾರರು ಮಾಲೀಕನೊಂದಿಗೆ ಜಟಾಪಟಿ ನಡೆಸಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಬಲವಂತವಾಗಿ ಅಂಗಡಿ ಮುಚ್ಚಿಸದಂತೆ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿ ಬಳಿಕ ಪ್ರತಿಭಟನಾಕಾರರನ್ನು ಮುಂದೆ ಕಳುಹಿಸಿದರು.

ಜಾಥಾಕ್ಕೆ ಸೀಮಿತ:

ಅಂಗಡಿ-ಮುಂಗಟ್ಟುಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಶಾಲಾ-ಕಾಲೇಜುಗಳು ತರಗತಿಗಳು ನಡೆದಿದ್ದವು. ಹೋಟೆಲ್‌, ಸಿನಿಮಾ ಮಂದಿರಗಳು, ಸರ್ಕಾರಿ ಕಚೇರಿಗಳು ಮಾಮೂಲಿನಂತೆ ಕಾರ್ಯನಿರ್ವಹಿಸಿದವು. ಬಸ್‌ಗಳು, ಆಟೋ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರ ಎಂದಿನಂತಿತ್ತು. ಪ್ರಯಾಣದಲ್ಲೆಲ್ಲೂ ಪ್ರಯಾಣಿಕರಿಗೆ ವ್ಯತ್ಯಯ ಉಂಟಾದಂತೆ ಕಂಡುಬರಲೇ ಇಲ್ಲ. ಬಂದ್‌ಗೆ ಯಾರೊಬ್ಬರಿಂದಲೂ ಬೆಂಬಲ ಸಿಗದಿದ್ದರಿಂದ ಜಾಥಾ ನಡೆಸುವುದಕ್ಕಷ್ಟೇ ಬಂದ್ ಸೀಮಿತವಾದಂತೆ ಕಂಡುಬಂದಿತು.