ಬಾಂಗ್ಲಾದಲ್ಲಿ ಹಿಂದೂಗಳ ಮೇಲಿದ ದೌರ್ಜನ್ಯಕ್ಕೆ ಖಂಡನೆ

| Published : Aug 13 2024, 12:52 AM IST

ಸಾರಾಂಶ

ವಿವಿಧ ಹಿಂದೂಪರ ಸಂಘಟನೆಗಳಿಂದ ಬೃಹತ್‌ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತುಮಕೂರುಬಾಂಗ್ಲಾ ದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಬಾಂಗ್ಲಾದಲ್ಲಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು, ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.ನೆಮ್ಮದಿಯ ವಾತಾವರಣ ಅಗತ್ಯ

ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮತಾಂಧರ ಕೈಗೆ ದೇಶಗಳ ಆಡಳಿತ ಸಿಗುತ್ತಿರುವುದು ಅಪಾಯಕಾರಿ ಸಂಗತಿ. ಬಾಂಗ್ಲಾ ದೇಶದಲ್ಲೂ ಇದೇ ಪರಿಸ್ಥಿತಿ ಇದ್ದು ಅಲ್ಲಿನ ಹಿಂದೂಗಳ ಮೇಲೆ ಮುಸ್ಲೀಂ ಮೂಲಭೂತವಾದಿಗಳು ಅತ್ಯಾಚಾರ, ಅನಾಚಾರ ಮಾಡುತ್ತಿದ್ದಾರೆ. ಹಿಂದುಗಳ ಮೇಲೆ ಅಮಾನುಶ ದಾಳಿ, ಕ್ರೌರ್ಯ ನಿಯಂತ್ರಿಸುವಲ್ಲಿ ಅಲ್ಲಿನ ಸರ್ಕಾರ ಮುಂದಾಗಿ ಹಿಂದುಗಳ ರಕ್ಷಣೆ ಮಾಡಿ ಅವರು ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಬಾಂಗ್ಲಾದ ಹಿಂದೂಗಳ ರಕ್ಷಣೆಗೆ ಪ್ರಧಾನಿ ಮೋದಿ ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳುತ್ತದೆ. ದೇಶದ ಹಿಂದೂಗಳೆಲ್ಲಾ ಬಾಂಗ್ಲಾ ಹಿಂದೂಗಳಿಗೆ ನೈತಿಗೆ ಬೆಂಬಲ ನೀಡಬೇಕು ಎಂದು ಜ್ಯೋತಿಗಣೇಶ್ ಮನವಿ ಮಾಡಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ, ನೆರೆಯ ಬಾಂಗ್ಲಾ ದೇಶದ ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ನಂತರ ಅಲ್ಲಿ ಅರಾಜಕತೆ ಸೃಷ್ಟಿಯಾಗಿ ಕಾನೂನು ಮತ್ತು ಸುವ್ಯಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ. ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದೂಗಳನ್ನು, ಹಿಂದೂಗಳ ಆಸ್ತಿಪಾಸ್ತಿ, ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಹಿಂದೂಗಳ ಸುರಕ್ಷತೆಗಾಗಿ ಮತ್ತು ಅವರ ಮಾನವ ಹಕ್ಕುಗಳ ರಕ್ಷಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಘೋರ ದಾಳಿ ನಡೆಯುತ್ತಿದೆ. ಅಲ್ಲಿನ ಸರ್ಕಾರ ರಕ್ಷಣಾ ಕ್ರಮ ಕೈಗೊಳ್ಳದೆ ಕಡೆಗಣಿಸಿದೆ. ಈ ಭೀಕರ ಪರಿಸ್ಥಿತಿಯ ಲಾಭ ಪಡೆದುಕೊಂಡು ಗಡಿಯಾಚೆಯಿಂದ ಜಿಹಾದಿಗಳು ಒಳನುಸುಳಿವಿಕೆ ಪ್ರಯತ್ನ ತಡೆಯಲು ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳಬೇಕು. ಬಾಂಗ್ಲಾದಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಿಂದೂಗಳಿಗೆ ರಕ್ಷಣೆ ನೀಡಿ, ಪುನರ್ ನಿರ್ಮಾಣ ಕಾರ್ಯಗಳನ್ನು ಅಲ್ಲಿನ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.ವಿಶ್ವ ಹಿಂದೂಪರಿಷತ್ ಮುಖಂಡ ಜಿ.ಕೆ.ಶ್ರೀನಿವಾಸ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಎಸ್.ಟಿ.ಮೋರ್ಚಾ ರಾಜ್ಯ ಕಾರ್ಯದರ್ಶಿ ಅನಿಲ್‌ಕುಮಾರ್,ರಾಜ್ಯ ವಕ್ತಾರ ಎಚ್.ಎನ್.ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಉಪಾಧ್ಯಕ್ಷ ಬೆಳ್ಳಿ ಲೋಕೇಶ್, ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಹೆಚ್.ಹನುಮಂತರಾಜು, ಯುವಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಪ್ರಧಾನ ಕಾರ್ಯದರ್ಶಿ ಧನುಷ್, ಮುಖಂಡರಾದ ಭೈರಣ್ಣ, ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ಕರುಣಾರಾಧ್ಯ, ಪುಟ್ಟರಾಜು, ಗೋಪಾಲಕೃಷ್ಣ, ಗಣೇಶ್ ಪ್ರಸಾದ್, ಸೊಗಡು ಕುಮಾರಸ್ವಾಮಿ, ಗೋಕುಲ ಮಂಜುನಾಥ್, ನಂಜುಂಡಸ್ವಾಮಿ ಮೊದಲಾದವರು ಭಾಗವಹಿಸಿದ್ದರು.ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.