ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ

| Published : Aug 15 2024, 01:45 AM IST

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಭದ್ರಾವತಿಯಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ‘ಮಾನವ ಸರಪಳಿ’ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಹಿಂದೂಗಳನ್ನು ರಕ್ಷಿಸುವಂತೆ ಆಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ / ಸೊರಬ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ‘ಮಾನವ ಸರಪಳಿ’ ನಿರ್ಮಿಸಿ ಪ್ರತಿಭಟನೆ ನಡೆಸುವ ಮೂಲಕ ಹಿಂದೂಗಳನ್ನು ರಕ್ಷಿಸುವಂತೆ ಆಗ್ರಹಿಸಲಾಯಿತು.

ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ ನಗರದ ಮಾಧವಾಚಾರ್ ವೃತ್ತದಲ್ಲಿ ಸಮಿತಿ ವತಿಯಿಂದ ಜನಜಾಗೃತಿಗೋಸ್ಕರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ `ಮಾನವ ಸರಪಳಿ ನಿರ್ಮಿಸಿ ಹಾಗೂ ‘ಸೇವ್ ಹಿಂದೂಸ್ ಇನ್ ಬಾಂಗ್ಲಾದೇಶ್’ ರಂಗೋಲಿ ಚಿತ್ತಾರದೊಂದಿಗೆ ಸಾತ್ವಿಕ ಹಾಗೂ ನೈತಿಕ ಬೆಂಬಲವನ್ನು ಸೂಚಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಹಾ.ರಾಮಪ್ಪ, ಬಜರಂಗದಳ ಪ್ರಮುಖರಾದ ರಾಘವನ್ ವಡಿವೇಲು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ, ಶಿವರಾಜ್, ಡಾ.ದತ್ತಾತ್ರೇಯ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಮುಖಂಡರಾದ ಬಿ.ಕೆ ಶ್ರೀನಾಥ್, ವಿ.ಕದಿರೇಶ್, ಜಿ. ಆನಂದ್ ಕುಮಾರ್, ಎಂ. ಮಂಜುನಾಥ್, ಚನ್ನೇಶ್, ಮೊಸರಹಳ್ಳಿ ಅಣ್ಣಪ್ಪ, ಬಿ.ಜಿ.ರಾಮಲಿಂಗಯ್ಯ, ಮಂಜಪ್ಪ, ನರಸಿಂಹಚಾರ್, ಟಿ.ವೆಂಕಟೇಶ್, ಕರಿಗೌಡ್ರು, ಕಾ.ರಾ.ನಾಗರಾಜ್, ಪ್ರಸನ್ನ ಬಾರಂದೂರು, ರಾಜಶೇಖರ್ ಉಪ್ಪಾರ, ಜೆ.ಎಂ.ಜಗದೀಶ್ ಪಟೇಲ್ ಹಾಗೂ ಮಹಿಳಾ ಪ್ರಮುಖರಾದ ಮಂಜುಳ, ಅನ್ನಪೂರ್ಣ ಸೇರಿದಂತೆ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. ಬಾಂಗ್ಲಾ ಹಿಂಸಾಚಾರ ಬಗ್ಗೆ ಜಗತ್ತಿನ ಯಾವ ರಾಷ್ಟ್ರವೂ ಧ್ವನಿ ಎತ್ತಿಲ್ಲವೇಕೆ?

ಸೊರಬ: ಬಾಂಗ್ಲಾದೇಶದಲ್ಲಿ ಮೀಸಲಾತಿ ನೆಪದಲ್ಲಿ ಅಲ್ಲಿನ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ. ಆದರೆ ಈ ಬಗ್ಗೆ ಜಗತ್ತಿನ ಯಾವ ರಾಷ್ಟ್ರವು ಧ್ವನಿ ಎತ್ತುತ್ತಿಲ್ಲ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎಸ್.ಕಾಳಿಂಗರಾಜ್ ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಮೀಸಲಾತಿಯಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಅರಾಜಕತೆ ನಿರ್ಮಾಣವಾಗಿದೆ. ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಬಾಂಗ್ಲಾ ಇಸ್ಲಾಮಿಕ್ ಜಿಹಾದಿ ಗಳು ಸ್ತ್ರೀಯರ, ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇತ್ತೀಚಿಗೆ ಗಾಜಾ ಪಟ್ಟಿಯಲ್ಲಿ ಏನಾದರೂ ಘಟಿಸಿದರೆ ವಿಶ್ವಸಂಸ್ಥೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ, ಬಾಂಗ್ಲಾದೇಶದ ಹಿಂದುಗಳ ಮೇಲಿನ ಆಕ್ರಮಣಗಳ ಬಗ್ಗೆ ಜಗತ್ತಿನಲ್ಲಿ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಡಾ.ಹೆಚ್.ಇ.ಜ್ಞಾನೇಶ್ ಮಾತನಾಡಿ, ಭಾರತದಲ್ಲಿರುವ ಸೆಕ್ಯುಲರ್‌ವಾದಿಗಳು ಮತ್ತು ಬುದ್ಧಿಜೀವಿಗಳು ಟರ್ಕಿಯಲ್ಲಿ ಅಥವಾ ಪ್ಯಾಲಿಸ್ತೈನ್‌ನಲ್ಲಿ ಸಂಭವಿಸುವ ಘಟನೆಗಳಿಗೆ ಧ್ವನಿ ಎತ್ತುತ್ತಾರೆ. ಆದರೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಅವರ ಡೋಂಗಿ ಮಾನಸಿಕತೆಯನ್ನು ತೋರಿಸುತ್ತದೆ ಎಂದು ದೂರಿದರು.

ಇದಕ್ಕೂ ಮೊದಲು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಸ್‌ಸ್ಟಾಂಡ್ ವೃತ್ತದಲ್ಲಿ ಮಾನವ ಸರಪಳಿ ರಚಿಸಲಾಯಿತು. ನಂತರ ತಾಲೂಕು ಕಛೇರಿಗೆ ತೆರಳಿ ಶಿರಸ್ತೇದಾರರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪುರಸಭಾ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಮಧುರಾಯ ಜಿ.ಶೇಟ್, ಯುವಾ ಬ್ರಿಗೇಡ್‌ನ ಮೊಗವೀರ, ಗುರುಮೂರ್ತಿ ಹಿರೇಶಕುನ, ಮಹೇಶ್ ಗೋಖಲೆ, ಸುಧೀರ ಪೈ ಸೇರಿದಂತೆ ಸಾರ್ವಜನಿಕ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಹಿಂದೂಪರ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ ಚಿಂತಕರು ಭಾಗವಹಿಸಿದ್ದರು.