ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಎಸ್.ಟಿ. ಘಟಕ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಎಸ್.ಟಿ. ಘಟಕ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಎಚ್.ಎಸ್. ಕುಮಾರಸ್ವಾಮಿ ಮಾತನಾಡಿ, ಪ್ರಭಾವಿ ನಾಯಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಇಡಿ ಅಸ್ತ್ರ ಬಳಸಿರುವುದು ಖಂಡನೀಯ, ಅವರ ಜನಪ್ರಿಯತೆ, ರಾಜಕೀಯ ಶಕ್ತಿಯನ್ನು ಹತ್ತಿಕ್ಕುವ ಬಿಜೆಪಿ ನಾಯಕರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು ವಿರೋಧಿಗಳನ್ನು ಹತ್ತಿಕ್ಕುವ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಮುಂದಿನ ದಿನಗಳಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಸತೀಶ್ ಜಾರಕಿಹೊಳಿ ಕೇವಲ ವಾಲ್ಮೀಕಿ ಸಮಾಜದ ನಾಯಕರಲ್ಲ, ಎಲ್ಲಾ ವರ್ಗದವರೂ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಇ.ಡಿ ದಾಳಿ ಮೂಲಕ ಅವರನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

ವಾಲ್ಮೀಜಿ ಸಮಾಜದ ಮುಖಂಡ ಪ್ರತಾಪ್ ಮದಕರಿ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ರಾಷ್ಟ್ರಮಟ್ಟದ ಅಹಿಂದ ನಾಯಕ, ಅವರ ವರ್ಚಸ್ಸು ಕುಂದಿಸಲು, ಅವರ ರಾಜಕೀಯ ಶಕ್ತಿಯನ್ನು ಮಣಿಸಲು ಬಿಜೆಪಿ ಇ.ಡಿ. ಅಸ್ತ್ರ ಬಳಸಿದೆ. ಇ.ಡಿ. ದಾಳಿಯಾದ ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾದರು, ಡಾ.ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾದರು. ಮುಂದೆ ಸತೀಶ್ ಜಾರಕಿಹೊಳಿ ಅವರು ಈ ರಾಜ್ಯದ ಮುಖ್ಯಮಂತ್ರಿಗಾಗುವುದು ಖಚಿತ ಎಂದರು. ವಿರೋಧ ಪಕ್ಷದ ನಾಯಕರನ್ನು ಇ.ಡಿ. ದಾಳಿ ಮೂಲಕ ಹತ್ತಿಕ್ಕುವ ಕುತಂತ್ರ ಕೆಲಸ ಬಿಟ್ಟು ಕೇಂದ್ರ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಗಮನಹರಿಸಲಿ ಎಂದು ಹೇಳಿದ ಅವರು, ಇ.ಡಿ. ದಾಳಿ ಖಂಡಿಸಿ ಶುಕ್ರವಾರ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ಭಾಗ್ಯಮ್ಮ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇ.ಡಿ. ದಾಳಿ ರಾಜಕೀಯಪ್ರೇರಿತ. ವಿರೋಧಿಗಳನ್ನು ಮಣಿಸಲು ಬಿಜೆಪಿ ನಾಯಕರು ಇ.ಡಿ. ಸಂಸ್ಥೆಯನ್ನು ದರ‍್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಎಸ್.ಟಿ. ಘಟಕ ಜಿಲ್ಲಾ ಉಪಾಧ್ಯಕ್ಷ ಪುರುಷೋತ್ತಮ್ ಬಾಬು, ತುರುವೇಕೆರೆ ವಾಲ್ಮೀಕಿ ಸಮಾಜ ಅಧ್ಯಕ್ಷ ವಸಂತಕುಮಾರ್, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾಧ್ಯಕ್ಷ ರಾಮಾಂಜನಯ್ಯ, ಮುಖಂಡರಾದ ಸೌಭಾಗ್ಯಮ್ಮ, ಯಶೋಧ, ಗೌಸ್ ಪೀರ್ ಮೊದಲಾದವರು ಭಾಗವಹಿಸಿದ್ದರು.