ಅಹಿಂದ, ಹಿಂದುಳಿದ ಜಾತಿಗಳ ತಾಲ್ಲೂಕು ಘಟಕದ ಒಕ್ಕೂಟ ಮತ್ತು ವಾಲ್ಮೀಕಿ ಸಮಾಜದ ತಾಲ್ಲೂಕು ಘಟಕದಿಂದ ಮಂಗಳವಾರ ಸಚಿವ ಜಾರಕಿಹೊಳಿ ಅವರ ಮನೆ ಮತ್ತಿತರ ಸಂಸ್ಥೆಗಳ ಮೇಲೆ ನಡೆದಿರುವ ರಾಜಕೀಯ ಪ್ರೇರಿತ ದಾಳಿ ಖಂಡಿಸಿ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಅಹಿಂದ, ಹಿಂದುಳಿದ ಜಾತಿಗಳ ತಾಲ್ಲೂಕು ಘಟಕದ ಒಕ್ಕೂಟ ಮತ್ತು ವಾಲ್ಮೀಕಿ ಸಮಾಜದ ತಾಲ್ಲೂಕು ಘಟಕದಿಂದ ಮಂಗಳವಾರ ಸಚಿವ ಜಾರಕಿಹೊಳಿ ಅವರ ಮನೆ ಮತ್ತಿತರ ಸಂಸ್ಥೆಗಳ ಮೇಲೆ ನಡೆದಿರುವ ರಾಜಕೀಯ ಪ್ರೇರಿತ ದಾಳಿ ಖಂಡಿಸಿ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು.ಜಾರಕಿಹೊಳಿ ಅವರು ಕೇವಲ ನಾಯಕ ಸಮಾಜಕ್ಕೆ ಸೀಮಿತವಾದವರಲ್ಲ. ರಾಜ್ಯದ ಎಲ್ಲಾ ಸಮುದಾಯಗಳ, ಅಸಹಾಯಕರ, ದಲಿತರ ಪರವಾಗಿ ನಿರಂತರ ಹೋರಾಡುತ್ತಾ ಅಹಿಂದ ನಾಯಕರಾಗಿ ಹೊರಹೊಮ್ಮಿರುವುದನ್ನು ಸಹಿಸಲಾಗದ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ರಾಜಕೀಯವಾಗಿ ಮುಗಿಸುವ ಸಂಚು ನಡೆಸಿದ್ದಾರೆ. ಲಕ್ಷ ಜನ ಜಾರಕಿಹೊಳಿ ಅವರ ಬೆನ್ನಿಗೆ ನಿಂತಿದ್ದಾರೆ. ಇಡಿ ದಾಳಿ ಅತ್ಯಂತ ದುರುದ್ದೇಶದಿಂದ ಕೂಡಿದೆ. ಖಂಡಿತವಾಗಿಯೂ ಅವರು ನಿರ್ದೋಷಿ ಗಳಾಗಿ ಹೊರ ಬರುತ್ತಾರೆ ಎಂದು ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಉಮಲೂಟಿ ಹೇಳಿದರು.
ಅಹಿಂದ ತಾಲ್ಲೂಕು ಘಟಕದ ಅಧ್ಯಕ್ಷ ರಾಯಪ್ಪ ವಕೀಲ, ಮುಖಂಡರಾದ ದೇವೇಂದ್ರಪ್ಪ ಯಾಪಲಪರ್ವಿ, ಎಚ್.ಎನ್.ಬಡಿಗೇರ, ಬಾಬರ ಪಾಷಾ ವಕೀಲ, ನಾರಾಯಣ ಬೆಳಗುರ್ಕಿ, ಹಾರೂನ್ ಜಹಗೀರದಾರ್, ಖಾಜಿ ಮಲಿಕ್ ವಕೀಲ, ಅರುಣಕುಮಾರ ಯಾಪಲಪರ್ವಿ, ತಿಮ್ಮಣ್ಣ ಸಾಹುಕಾರ ಕುರುಕುಂದಿ, ತಿಮ್ಮಯ್ಯ ನಾಯಕ ಮಾತನಾಡಿ ಸ್ವಾಯತ್ತ ಸಂಸ್ಥೆಗಳಾದ ಇಡಿ, ಸಿ.ಬಿ.ಐ., ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ. ವಿರೋಧ ಪಕ್ಷಗಳ ಮುಖಂಡರ ಮೇಲೆ ದ್ವೇಷ ತೀರಿಸಿಕೊಳ್ಳಲು ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.ಬೆಳಗ್ಗೆ 9 ಗಂಟೆಯಿಂದ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಎ,ಪಿ.ಎಂ.ಸಿ. ಬಳಿ ಇರುವ ಗಜಾನನ ದೇವಸ್ಥಾನದ ಹತ್ತಿರ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು, ಅಭಿಮಾನಿಗಳು ಬಂದು ಸೇರಿದರು. ನಂತರ ಆರಂಭವಾದ ಮೆರವಣಿಗೆ ಬಸವವೃತ್ತ, ಬಸ್‌ನಿಲ್ದಾಣ ಮುಂಭಾಗದ ರಸ್ತೆ ಮೂಲಕ ಸಾಗಿ ಬಂದು ಗಾಂಧಿವೃತ್ತದಲ್ಲಿ ಮಾನವ ಸರಪಳಿಯಾಗಿ ಪರಿವರ್ತಿಸಲಾಯಿತು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಮುಖಂಡರಾದ ಹನುಮಂತಪ್ಪ ಪುಲದಿನ್ನಿ, ನಿರುಪಾದೆಪ್ಪ ಗುಡಿಹಾಳ ವಕೀಲ, ಛತ್ರಪ್ಪ ಕುರುಕುಂದಿ, ಬಿ.ಎಚ್.ನಾಯಕ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.
ಇಡಿ ವಿರೋಧಿಸಿ ಪಂಜಿನ ಮೆರವಣಿಗೆ: ಸಿರವಾರ: ಸಚಿವ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಅವರ ಮನೆ ಮತ್ತು ಕಚೇರಿ ಮೇಲೆ ಕೇಂದ್ರ ಸರ್ಕಾರ ರಾಜಕೀಯ ದ್ವೇಷದಿಂದ ಇಡಿ ದಾಳಿ ನಡೆಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಬೃಹತ್ ಪಂಜಿನ ರ್‍ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ವಾಲ್ಮೀಕಿ ವೃತ್ತದಿಂದ ಆರಂಭವಾದ ಈ ಪಂಜಿನ ಮೆರವಣಿಗೆ ಬಸ್ ನಿಲ್ದಾಣ, ಮುಖ್ಯ ಬಜಾರ್ ಮಾರ್ಗವಾಗಿ ಸಂಚರಿಸಿ ಮತ್ತೆ ವಾಲ್ಮೀಕಿ ವೃತ್ತದಲ್ಲಿ ಸಮಾಪ್ತಿಗೊಂಡಿತು. ಈ ಪಂಜಿನ ರ್‍ಯಾಲಿಯಲ್ಲಿ ಸಂಚಾಲಕ ಮೆಶಾಕ ದೊಡ್ಡಮನಿ,ಅಮರೇಶ ಮುರ್ಕಿಗುಡ್ಡ, ಶಂಕ್ರಣ್ಣ, ಶಿವರಾಜ, ರಂಗನಾಥ ಜಾಲಾಪುರ್, ಗೋಪಿ ಹೊಸಮನೆ, ಜೈರಾಜ್, ನಾಗರಾಜ, ಗುರು, ಬಸವ, ರಮೇಶ್, ರವಿ ಮಲ್ಲಟ, ಹನಮಂತ ದೋಣ್ಮರದಿ, ಸಾಬಣ್ಣ ಹುಂಚೆಡಿ, ನಾಗರಾಜ ಗೊಲ್ಲದಿನ್ನಿ ಹನಮಂತ, ರಾಜಪ್ಪ ಪಡಂದೊಡ್ಡಿ, ಉಮರ್, ಮಂಜುನಾಥ ಮರಾಟ, ದೇವರಾಜ, ಅಮರೇಶ್ ನುಗಡೋಣಿ, ಮಲ್ಲಿಕಾರ್ಜುನ, ಅಕ್ಬರ್, ಸಾಬಣ್ಣ, ರಹೀಮ್, ಮನ್ಸೂರ್, ನಾಸಿರ್, ಉಪ್ಪಿ, ಮಾರ್ಕ್ ಸೇರಿದಂತೆ ನೂರಾರು ಕಾಂಗ್ರೆಸ್, ಹಾಗೂ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು, ಎಲ್ಲಾ ಸಮಾಜದ ಮುಖಂಡರು, ಯುವಕರು ಭಾಗವಹಿಸಿದ್ದರು.