ರೈತರ ಪಂಪ್ ಸೆಟ್ ವಿದ್ಯುತ್ ಕಡಿತಕ್ಕೆ ಖಂಡನೆ: ಚೆಸ್ಕಾಂ ಕಚೇರಿ ಎದುರು ರೈತರ ಧರಣಿ ಆರಂಭ

| Published : Feb 22 2024, 01:48 AM IST

ರೈತರ ಪಂಪ್ ಸೆಟ್ ವಿದ್ಯುತ್ ಕಡಿತಕ್ಕೆ ಖಂಡನೆ: ಚೆಸ್ಕಾಂ ಕಚೇರಿ ಎದುರು ರೈತರ ಧರಣಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

10 ಎಚ್‌.ಪಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಮಡಿಕೇರಿಯ ಸೆಸ್ಕ್ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಬುಧವಾರ ಧರಣಿ ನಡೆಸಿತು. ರಾತ್ರಿ ವರೆಗೂ ರೈತರು ಧರಣಿ ಮುಂದುವರಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಬೆಳೆಗಾರರು ಕೃಷಿಗಾಗಿ ಅಳವಡಿಸಿರುವ 10 ಎಚ್‌.ಪಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಮಡಿಕೇರಿಯ ಸೆಸ್ಕ್ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಬುಧವಾರ ಧರಣಿ ನಡೆಸಿತು.ನಗರದ ಚೆಸ್ಕಾಂ ಕಚೇರಿ ಎದುರು ಜಮಾಯಿಸಿದ ಸಂಘದ ಪ್ರಮುಖರು ಹಾಗೂ ರೈತರು ಇಲಾಖೆಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಧರಣಿ ಕೂತರು.ರೈತರ ಬೇಡಿಕೆಗಳಿಗೆ ಕಾರ್ಯ ನಿರ್ವಾಹಕ ಅಧಿಕಾರಿ ಕಿಂಚಿತ್ತೂ ಸ್ಪಂದಿಸದೆ ರೈತರನ್ನು ಕಡೆಗಣಿಸಿದ್ದು, ರೈತರ ಹೋರಾಟವನ್ನು ಉನ್ನತ ಮಟ್ಟದ ಅಧಿಕಾರಿಗಳಿಗೆ ತಿಳಿಸದೆ ಉದ್ಧಟತನವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಮೇಲಾಧಿಕಾರಿ ಆದೇಶ ಬರುವ ತನಕ ನಮ್ಮಿಂದ ನಿಮ್ಮ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲವೆಂದು ಹಾಗು ಕಡಿತ ಗೊಳಿಸಿರುವುದನ್ನು ಸಕ್ರಿಯಗೊಳಿಸಲು ಸಾಧ್ಯವಿಲ್ಲ. ಮುಂದಿನ ದಿನದಲ್ಲಿ ಬಿಲ್ ಪಾವತಿ ಮಾಡದವರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ ಎಂದು ಆರೋಪಿಸಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ ರೈತರು ಸ್ಥಳೀಯ ಶಾಸಕರು ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ರೈತರ ಬೇಡಿಕೆಯನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಚೆಸ್ಕಾಂ ಕಚೇರಿಯ ಎದುರು ಪೆಂಡಾಲ್ ಹಾಕಿ ಆಹೋರಾತ್ರಿ ಧರಣಿ ಕೂತಿದ್ದಾರೆ.ಈ ಸಂದರ್ಭ ಮಾತನಾಡಿದ ರೈತ ಮುಖಂಡ ಹೇರೂರು ಚಂದ್ರಶೇಖರ್, ಈ ಹಿಂದೆ ಮೂರು-ನಾಲ್ಕು ಬಾರಿ ಕೊಡಗಿನ ರೈತರು ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ವಿವರವಾದ ಮನವಿಯನ್ನು ಸಲ್ಲಿಸಿದ್ದರು. ಇತರ ಬೆಳೆಗಳಿಗೆ ನೀಡುತ್ತಿರುವಂತೆಯೇ 10 ಎಚ್‌ಪಿ ಒಳಗಿನ ವಿದ್ಯುತ್ ಮೋಟಾರುಗಳಿಗೆ ಸಂಬಂಧಿಸಿದಂತೆ ಕೊಡಗಿನ ರೈತರಿಗೂ ವಿನಾಯಿತಿ ವಿಸ್ತರಿಸಿಕೊಬೇಕೆಂದು ಕೋರಿಕೊಳ್ಳಲಾಗಿತ್ತು. ಹಲವು ಬಾರಿ ಸರ್ಕಾರಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿಗಳು ಕೂಡ ಭರವಸೆ ನೀಡಿದ್ದರು. ಆದರೆ ಕೊಡಗಿನ ರೈತರ ಪರವಾದ ಯಾವುದೇ ಕ್ರಮವಾಗಿಲ್ಲ. ಬಾಕಿ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಆ ಹಣವನ್ನು ಬ್ಯಾಂಕ್ ಖಾತೆ ಮೂಲಕ ಹಿಂತಿರುಗಿಸುವ ಇಲಾಖೆಯ ಪ್ರಸ್ತಾಪ ಖಂಡನೀಯ ಎಂದರು.ಸರ್ಕಾರಿ ಆದೇಶದ ಪ್ರತಿಗಳನ್ನು ತಾರದೆ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿರುವುದು ಸರಿಯಲ್ಲ, ರೈತರ ಪಂಪ್ ಸೆಟ್‌ಗಳಿಗೆ ಮತ್ತೆ ಸಂಪರ್ಕ ಕಲ್ಪಿಸಬೇಕು. ತಪ್ಪಿದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕ್ಲಿವ ಪೊನ್ನಪ್ಪ , ದಾಸಂಡ ರಮೇಶ್ ಚೆಂಗಪ್ಪ , ಅರುಣ್ , ಗೌತಮ್ , ಶಾಶ್ವತ್ , ಅಯ್ಯಣ್ಣ , ಜಗನಾಥ್ ಜಿಲ್ಲೆಯ ರೈತರು ಪಾಲ್ಗೊಂಡಿದ್ದರು.