ಗೋವಾ ಸಿಎಂ ಹೇಳಿಕೆಗೆ ಖಂಡನೆ: 31ಕ್ಕೆ ನರಗುಂದದಲ್ಲಿ ಸಭೆ: ಸೊಬರದಮಠ

| Published : Jul 25 2025, 12:32 AM IST

ಗೋವಾ ಸಿಎಂ ಹೇಳಿಕೆಗೆ ಖಂಡನೆ: 31ಕ್ಕೆ ನರಗುಂದದಲ್ಲಿ ಸಭೆ: ಸೊಬರದಮಠ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ನೀಡಿರುವ ಹೇಳಿಕೆ ಆ ಹುದ್ದೆಗೆ ಗೌರವ ತರುವಂತಹದ್ದಲ್ಲ.

ಹುಬ್ಬಳ್ಳಿ: ಮಹದಾಯಿ ನೀರನ್ನು ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿರುವುದಕ್ಕೆ ಮಹದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಂದಿನ ಹೋರಾಟದ ರೂಪರೇಷೆ ಚರ್ಚಿಸಲು ರೈತಸೇನಾ ಕರ್ನಾಟಕವು ಜು. 31ರಂದು ನರಗುಂದದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಸಲಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ರೈತಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ, ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆ ಅತ್ಯಂತ ಖಂಡನೀಯ. ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ನೀಡಿರುವ ಹೇಳಿಕೆ ಆ ಹುದ್ದೆಗೆ ಗೌರವ ತರುವಂತಹದ್ದಲ್ಲ. ಈಗಾಗಲೇ ನ್ಯಾಯಾಧೀಕರಣದಲ್ಲಿ ತೀರ್ಪು ಆಗಿದೆ. ನಾವು ಕೇಳುತ್ತಿರುವುದು ಗೋವಾದ ನೀರನ್ನಲ್ಲ. ಬದಲಿಗೆ ಕರ್ನಾಟಕದಲ್ಲಿ ಹರಿದಿರುವ ನೀರು. ಇದನ್ನು ಗೋವಾ ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದರು.

ಈಗಾಗಲೇ ನಮ್ಮ ಪಾಲಿಗೆ 3.9 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಅದನ್ನೇ ಬಳಸಲು ಸಹ ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅನುಮತಿ ಕೊಡುತ್ತಿಲ್ಲ ಎಂದರೆ ಹೇಗೆ? ಎಂದರು.

ಮಹದಾಯಿ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದುಂಟು. ಡಿಸಿಎಂ ಡಿ.ಕೆ. ಶಿವಕುಮಾರ ಕೇಂದ್ರ ಸಚಿವ ಭೂಪೇಂದ್ರ ಯಾದವ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಆದರೂ ಕೇಂದ್ರ ಸರ್ಕಾರ ಅನುಮತಿ ಕೊಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿರುವ ಅವರು, ಡಿ.ಕೆ. ಶಿವಕುಮಾರ ಎಂಥದ್ದೇ ಕಠಿಣ ಪರಿಸ್ಥಿತಿ ಬಂದರೂ ಮಹದಾಯಿ, ಕಳಸಾ- ಬಂಡೂರಿ ಜಾರಿಗೊಳಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಈ ಹೇಳಿಕೆಗೆ ರೈತರೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

ರಾಜ್ಯದಲ್ಲಿ 28 ಸಂಸದರು, 12 ಜನ ರಾಜ್ಯಸಭಾ ಸದಸ್ಯರಿದ್ದಾರೆ. ಇವರು ಮಹದಾಯಿ ಕುರಿತು ಪಾರ್ಲಿಮೆಂಟ್‌ನಲ್ಲಿ ಒಂದೇ ಒಂದು ದಿನ ಚಕಾರ ಎತ್ತಿಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ರೈತಸೇನಾ ಕರ್ನಾಟಕವೂ ಜು. 31ರಂದು ನರಗುಂದದಲ್ಲಿ ಬೃಹತ್‌ ಸಭೆಯನ್ನು ನಡೆಸಲಾಗುವುದು. ಅಲ್ಲಿ ಚರ್ಚಿಸಿ ದೆಹಲಿ ಚಲೋ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ನಿರ್ಣಯಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.