ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದ ತನಿಖೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮತ್ತು ಹರಳಹಳ್ಳಿ ವಿಶ್ವನಾಥ್ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಬೊಮ್ಮೇಗೌಡ ವೃತ್ತದಲ್ಲಿ ರಸ್ತೆ ತಡೆ ನಡೆಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರಹಾಕಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸರ್ಕಾರದ ಸಚಿವರಾದ ರಾಜನಾಥ್ ಸಿಂಗ್, ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಿತ್ತಿ ಪತ್ರಗಳನ್ನು ಹಿಡಿದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ರಾಜ್ಯದ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆ. ಬಹುಮತವಿರುವ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ತಿರಗೊಳಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯಪಾಲರು ತಮ್ಮ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟದ ಕಿಚ್ಚು ಹತ್ತಿ ಉರಿಯಲಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ಮುಡಾ ಹಗರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ತನ್ನ ಅವಧಿಯಲ್ಲಿನ ತಪ್ಪನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರ ಹೆಸರನ್ನು ಎಳೆದು ತಂದು ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಪುರಸಭಾ ಸದಸ್ಯರಾದ ಕೆ.ಆರ್.ರವೀಂದ್ರ ಬಾಬು, ಡಿ.ಪ್ರೇಂಕುಮಾರ್, ತಾಲೂಕು ಕುರಬರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಗೌಡ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಎಲ್.ಪಿ.ನಂಜಪ್ಪ, ಜಿಪಂ ಮಾಜಿ ಸದಸ್ಯ ಕಿಕ್ಕೇರಿ ಮಂಜುನಾಥ್, ಬಸ್ತಿ ರಂಗಪ್ಪ, ಮಾಗೋನಹಳ್ಳಿ ಶಿವೇಗೌಡ, ಅಕ್ಕಿಹೆಬ್ಬಾಳು ಟಿ.ಎನ್.ದಿವಾಕರ, ಲಕ್ಷ್ಮೀಪುರ ಚಂದ್ರೇಗೌಡ, ತಾಪಂ ಮಾಜಿ ಸದಸ್ಯ ಸಣ್ಣನಿಂಗೇಗೌಡ, ಅಲ್ಪ ಸಂಖ್ಯಾತ ಘಟಕದ ಮುಖಂಡರಾದ ಇಲಿಯಾಸ್ ಅಹಮದ್, ಇಲಿಯಾಸ್ ಪಾಷ, ನವೀದ್ ಅಹಮದ್, ಫಯಾಜ್ ಖಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.