ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಅಪಮಾನಿಸಿರುವುದನ್ನು ಜಿಲ್ಲಾ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಶುಕ್ರವಾರ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿರೋಧ ಪಕ್ಷವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪೊಲೀಸರು ಕರ್ತವ್ಯ ಮರೆತು ಸಚಿವರ ಕೈಗೊಂಬೆಯಂತಾಗಿದ್ದಾರೆ ಎಂದರು.
ಚಿತ್ತಾಪುರದಲ್ಲಿ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ನಡೆಸಿದ ಹಲ್ಲೆ ಖಂಡನೀಯ, ಸ್ಥಳದಲ್ಲಿದ್ದ ಪೊಲೀಸರು ಸಚಿವರ ಬೆಂಬಲಿಗರ ಗೂಂಡಾಗಿರಿ ತಡೆಯಲಿಲ್ಲ. ರಾಜ್ಯದಲ್ಲಿ ಒಂದು ರೀತಿಯ ಗೂಂಡಾ ಆಡಳಿತ ನಡೆಯುತ್ತಿದೆ ಎಂದು ಟೀಕಿಸಿದರು.ಛಲವಾದಿ ನಾರಾಯಣಸ್ವಾಮಿಯವರು ಈ ಹಿಂದೆ ಖರ್ಗೆ ಕುಟಂಬದ ಅಕ್ರಮ ಆಸ್ತಿಗಳ ಬಗ್ಗೆ ಸದನದಲ್ಲಿ ಹೋರಾಟ ನಡೆಸಿದ್ದರ ಪರಿಣಾಮವಾಗಿ ಕೆಐಎಡಿಬಿಯು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಗೆ ನೀಡಿದ್ದ ಐದು ಎಕೆರೆ ಭೂಮಿಯನ್ನು ಹಿಂದಿರುಗಿಸಬೇಕಾಯಿತು. ಆಕ್ರಮ ಆಸ್ತಿಗಳ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ್ದಕ್ಕೆ, ಆಸ್ತಿ ಹಿಂದಿರುಗಿಸಬೇಕಾದ ಸ್ಥಿತಿ ಉಂಟಾಗಿದ್ದಕ್ಕೆ ಸೇಡಿನಿಂದ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರಿಂದ ನಾರಾಯಣಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿದೆ. ಚಿತ್ತಾಪುರದಲ್ಲಿ ನಡೆದ ಘಟನೆ ಪೂರ್ವ ನಿಯೋಜಿತ ಮತ್ತು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದರು.
ಕಲಬುರ್ಗಿಯಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ಆಡಳಿಯ ಯಂತ್ರ ದುರ್ಬಳಕೆ ಮಾಡಿ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ನಾಯಕರ ವಿರುದ್ಧ ರಾಜಕೀಯ ದ್ವೇಷ ಸಾಧಿಸಿರುವ ಕಾರಣದಿಂದ ಪ್ರಿಯಾಂಕ್ ಖರ್ಗೆ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೇ 24 ರಂದು ಕಲಬುರ್ಗಿ ಚಲೋ ನಡೆಸಲಾಗುವುದು ಎಂದು ಹೇಳಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವಹೇಳನಾಕಾರಿಯಾಗಿ ಟೀಕಿಸುತ್ತಿದ್ದಾರೆ. ಇದನ್ನು ಬಿಜೆಪಿ ಸಹಿಸುವುದಿಲ್ಲ. ಸಚಿವ ಖರ್ಗೆಯವರು ರಾಜ್ಯದಲ್ಲಿ ಹದಗೆಟ್ಟಿರುವ ಆಡಳಿತ ವ್ಯವಸ್ಥೆ ಸರಿಪಡಿಸುವತ್ತ ಗಮನಹರಿಸಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಸಚಿವ ಡಾ.ಪರಮೇಶ್ವರ್ ಸಂಪೂರ್ಣ ವಿಫಲವಾಗಿದ್ದಾರೆ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎ.ಆಂಜನಪ್ಪ ಮಾತನಾಡಿ, ಛಲವಾದಿ ನಾರಾಯಣಸ್ವಾಮಿಯವರ ಮೇಲೆ ಖರ್ಗೆ ಬೆಂಬಲಿಗರು ಹಲ್ಲೆ ನಡೆಸಲು ಯತ್ನಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವರ ಕಾರಿನ ಮೇಲೆ ಇಂಕ್ ಹಾಕಿ ವಿಕೃತಿ ಮೆರೆದಿದ್ದಾರೆ. ದಲಿತರ ಮೇಲಿನ ದಾಳಿ ಇದೇ ಮೊದಲೇನೂ ಅಲ್ಲ. ಜೇವರ್ಗಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಾಸಕ ಬಸವರಾಜ್ ಮುತ್ತಿಮಡ್ ಮೇಲೆ ಪೊಲೀಸ್ ದೌರ್ಜನ್ಯ ಮೆರೆದಿದ್ದರು. ಇದು ದಲಿತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಕಾರ್ಯದರ್ಶಿ ಓಂಕಾರ್ ಮಾತನಾಡಿ, ಛಲವಾದಿ ನಾರಾಯಣಸ್ವಾಮಿಯವರ ಏಳಿಗೆ ಸಹಿಸದೆ ಸಚಿವ ಪ್ರಿಯಾಂಕ್ ಖರ್ಗೆ ಅಪಮಾನ ಮಾಡಿದ್ದಾರೆ. ಸಂವಿಧಾನದ ಬಗ್ಗೆ ಕೇವಲ ಭಾಷಣ ಮಾಡುವ ಪ್ರಿಯಾಂಕ್ ಖರ್ಗೆ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ಕಟ್ಟಾ ಬೆಂಬಲಿಗರಾಗಿದ್ದ ಛಲವಾದಿ ನಾರಾಯಣಸ್ವಾಮಿಯವರಿಗೆ ಅವಮಾನ ಮಾಡಿ ಪಕ್ಷ ಬಿಡುವಂತೆ ಮಾಡಿದ್ದವರು. ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅಂಜನಮೂರ್ತಿ, ಹನುಮಂತರಾಯಪ್ಪ, ರಮೇಶ್, ಜೆ.ಜಗದೀಶ್, ಧನುಷ್, ಸಿದ್ಧಗಂಗಯ್ಯ ಹಾಜರಿದ್ದರು.