ಸರ್ಕಾರಿ ಕಚೇರಿಗಳಲ್ಲಿ ರೈತರ ನಿರ್ಲಕ್ಷ್ಯಕ್ಕೆ ಖಂಡನೆ

| Published : Feb 06 2024, 01:34 AM IST

ಸಾರಾಂಶ

ಚನ್ನಪಟ್ಟಣ: ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ರೈತರನ್ನು ನಿರ್ಲಕ್ಷಿಸುವುದಲ್ಲದೆ, ಅಧಿಕಾರಿಗಳು ಅಸಡ್ಡೆಯಿಂದ ನೋಡುತ್ತಿದ್ದು, ತಪ್ಪು ಮಾಹಿತಿ ನೀಡಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ರೈತರ ಮೇಲೆ ಅಧಿಕಾರಿಗಳ ತಾತ್ಸಾರ ಮನೋಭಾವ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಚನ್ನಪಟ್ಟಣ: ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ರೈತರನ್ನು ನಿರ್ಲಕ್ಷಿಸುವುದಲ್ಲದೆ, ಅಧಿಕಾರಿಗಳು ಅಸಡ್ಡೆಯಿಂದ ನೋಡುತ್ತಿದ್ದು, ತಪ್ಪು ಮಾಹಿತಿ ನೀಡಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ರೈತರ ಮೇಲೆ ಅಧಿಕಾರಿಗಳ ತಾತ್ಸಾರ ಮನೋಭಾವ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸೋಮವಾರ ನಗರದ ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯನ್ನು ಖಂಡಿಸಿದರು. ತಾಲೂಕು ಆಡಳಿತ ಹಾಗೂ ಸರ್ಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕುರಿತು ಕಾಳಜಿ ಇಲ್ಲ:

ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತಕ್ಕೆ ರೈತರ ಕುರಿತ ಕಾಳಜಿಯೇ ಇಲ್ಲವಾಗಿದೆ. ಸರ್ಕಾರಿ ಅಧಿಕಾರಿಗಳು ಜನರ ಕೆಲಸ ಮಾಡುವುದನ್ನು ಬಿಟ್ಟು ತಮ್ಮ ಕುಟುಂಬದ ಹಿತಾಸಕ್ತಿಗಾಗಿ ದುಡಿಯುತ್ತಿದ್ದಾರೆ. ಬಹುತೇಕ ಎಲ್ಲ ಇಲಾಖೆಗಳಲ್ಲೂ ಲಂಚವಿಲ್ಲದೇ ಕೆಲಸವಾಗುವುದಿಲ್ಲ ಎಂಬ ಪರಿಸ್ಥಿತಿ ಇದೆ. ಅದರಲ್ಲೂ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಕೆಲಸ ಮಾಡುವ ಆಸಕ್ತಿ ಇಲ್ಲದ ಮೇಲೆ ನೌಕರಿಗೆ ಏಕೆ ಸೇರಬೇಕು ಎಂದು ಪ್ರಶ್ನಿಸಿದರು.

ಕಂದಾಯ, ವಿದ್ಯುತ್, ಕೃಷಿ, ರೇಷ್ಮೆ, ತೋಟಗಾರಿಕೆ, ಕೃಷಿ ಮಾರುಕಟ್ಟು ಅರಣ್ಯ, ಸಹಕಾರ ಸೇರಿದಂತೆ ಮತ್ತು ಇತರೆ ಸರ್ಕಾರಿ ಇಲಾಖೆಗಳಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆ. ತಮ್ಮ ಕೆಲಸ ಕಾರ್ಯಗಳಿಗೆ ರೈತರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಅಲೆಯುವಂತಾಗಿದೆ. ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿದ ಪರಿಣಾಮ ರೈತರು ಬ್ಯಾಂಕ್‌ಗಳಿಗೆ, ಸೈಬರ್ ಸೆಂಟರ್‌ಗಳಿಗೆ ಅಲೆದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡಿ ರೈತರ ಕೆಲಸಗಳನ್ನು ಕಾಲಮಿತಿಯೊಳಗೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತಪ್ಪಿತಸ್ಥರನ್ನೇ ಹೊಣೆಯಾಗಿಸಿ:

ಸಿಬ್ಬಂದಿ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ರೈತರಿಗೆ ನೀಡುವ ದಾಖಲೆಗಳಲ್ಲಿ ಬೇಕೆಂದು ತಪ್ಪು ಮಾಹಿತಿ ದಾಖಲಿಸಿ ಎ.ಸಿ. ಡಿ.ಸಿ ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ತಪ್ಪು ದಾಖಲೆ ನಮೂದಿಸಿದ ಸಿಬ್ಬಂದಿಯನ್ನೇ ಇದಕ್ಕೆ ಹೊಣೆಯಾಗಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ರೆಕಾರ್ಡ್ ರೂಂನಿಂದ ಕಾಣೆಯಾದ ದಾಖಲೆಗಳಿಗೆ ಸಂಬಂಧಿಸಿದಂತೆ ಸಂಬಂಧಿತ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಿಸಬೇಕು. ಖಾತೆ ವರ್ಗಾವಣೆ ಮಾಡುವಾಗ ಸ್ಥಳ ಮಹಜರು ಹಾಗೂ ಬಾಜುದಾರರ ಸಾಕ್ಷಿ ಪಡೆಯಬೇಕು.

ಇದೇ ವೇಳೆ ರೈತರ ಹಕ್ಕೋತ್ತಾಯಗಳನ್ನು ತಹಸೀಲ್ದಾರ್ ಮಹೇಂದ್ರಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತರ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ತಾಲೂಕು ಅಧ್ಯಕ್ಷ ರಾಮೇಗೌಡ, ಕಾರ್ಯದರ್ಶಿ ಕೋದಂಡರಾಮ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ರಾಜ್ಯ ಕಮಿಟಿಯ ಮುನಿರಾಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಗಳಮ್ಮ, ಜಿಲ್ಲಾ ಉಪಾಧ್ಯಕ್ಷ ಕೆ.ಎನ್.ರಾಜು ಇತರರಿದ್ದರು.

ಬಾಕ್ಸ್‌.........ಹಲವು ಹಕ್ಕೊತ್ತಾಯಗಳು:

ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಕಚೇರಿ ತೆರೆದು ಪ್ರತಿನಿತ್ಯ ಸಾರ್ವಜನಿಕರಿಗೆ ಪರಿಹರಿಸಬೇಕು. ಆದಾಯ ದೃಢೀಕರಣ, ವಂಶವೃಕ್ಷ, ಜನನ, ಮರಣ, ಇಡುವಳಿ ಪ್ರಮಾಣ ಪತ್ರ, ನೀರಿನ ಪತ್ರ ಇತರೆ ದಾಖಲಾತಿಗಳ ವಿತರಣೆಗಾಗಿ ಉಪ-ತಹಸೀಲ್ದಾರರು ಕಚೇರಿಯಲ್ಲಿ ಲಭ್ಯವಿರುವಂತೆ ಆದೇಶಿಸಬೇಕು. ಎಲ್ಲ ಸರ್ಕಾರಿ ಕಚೇರಿಯಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ ಹಾಗೂ ಸಿಸಿ ಕ್ಯಾಮೇರಾ ಅಳವಡಿಸಬೇಕು. ಕಚೇರಿ ವೇಳಾಪಟ್ಟಿಯನ್ನು ಕಚೇರಿ ಮುಂದೆ ಪ್ರದರ್ಶಿಸುವ ಜತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಡುಪಿನ ಮೇಲೆ ತಮ್ಮ ಹೆಸರು ಹಾಗೂ ಹುದ್ದೆಯನ್ನು ಕಾಣಿಸುವಂತೆ ನಮೂದಿಸಬೇಕು ಎಂದು ಆಗ್ರಹಿಸಿದರು.

ಕೆರೆ, ಕಟ್ಟೆ, ಒರೆ, ದಾರಿ, ಗೋಮಾಳ, ಗುಂಡು ತೋಪು ಮುಂತಾದವುಗಳ ಒತ್ತುವರಿ ತೆರವಿಗೆ ಪ್ರತ್ಯೇಕ ಮೋಜಿಣಿದಾರರನ್ನು ನೇಮಿಸಬೇಕು. ಗಣಕೀಕೃತ ಪಹಣಿ ಮತ್ತು ಮ್ಯೂಟೇಷನ್‌ಗೆ ಹೆಚ್ಚಿಸಿರುವ ದರವನ್ನು ಕಡಿತಗೊಳಿಸಬೇಕು.

ಮಾಹಿತಿ ಹಕ್ಕು ನಿಯಮದಡಿ ಸಲ್ಲಿಕೆಯಾದ ಅರ್ಜಿಗಳಿಗೆ ಮಾಹಿತಿಯೇ ನೀಡದ ಪ್ರವೃತ್ತಿ ಕೊನೆಗಾಣಬೇಕು. ಪಹಣಿ, ಆಧಾರ್ ಪಡೆಯಲು ಖಾಸಗಿ ಸೈಬರ್‌ಗಳಿಗೆ ರೈತರನ್ನು ಅಲೆದಾಡಿಸದೆ ಕಚೇರಿ ಆವರಣದಲ್ಲೇ ಆಟಲ್ ಜೀ ಸೇವಾ ಕೌಂಟರ್‌ಗಳನ್ನು ಹೆಚ್ಚು ತೆರೆಯಬೇಕು. ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಿ ಬೆಳೆ ಹಾಗೂ ರೈತರ ಜೀವ ಹಾನಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರ ಬೆಳೆಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕು.

ಪಡಿತರ ವಿತರಣೆಯನ್ನು ಕೆಲವು ನ್ಯಾಯಬೆಲೆ ಅಂಗಡಿಗಳು ತಿಂಗಳಲ್ಲಿ ಕೆಲವು ೩ ದಿನ ಮಾತ್ರ ವಿತರಿಸುವ ಪದ್ಧತಿ ಕೊನೆಗೊಳ್ಳಬೇಕು. ಅಡುಗೆ ಅನಿಲಕ್ಕೆ ಹೆಚ್ಚುವರಿಯಾಗಿ ಪಡೆಯುತ್ತಿರುವ ಸಾಗಾಣಿಕೆ ವೆಚ್ಚವನ್ನು ನಿಲ್ಲಿಸಬೇಕು. ಬೆಸ್ಕಾಂ ಇಲಾಖೆ ಹೊಸ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಜೇಷ್ಠತೆಯನ್ನು ಪರಿಗಣಿಸಬೇಕು. ೧೦ ತಾಸು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು. ಸಕಾಲಿಕ ಬಿತ್ತನೆ ಬೀಜ. ರಸಗೊಬ್ಬರ ಹಾಗೂ ಗುಣಮಟ್ಟದ ಕ್ರಿಮಿನಾಶಕ ವಿತರಿಸಬೇಕು. ಕೃಷಿ ಮಾರುಕಟ್ಟೆಯಲ್ಲಿ ಬಿಳಿ ಚೀಟಿ ದಂದೆ ನಿಲ್ಲಿಸಿಸಬೇಕು ಎಂದು ೩೮ ಹಕ್ಕೋತ್ತಾಯಗಳನ್ನು ಮಂಡಿಸಿದರು.ಪೊಟೋ೫ಸಿಪಿಟಿ೪:

ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಚನ್ನಪಟ್ಟಣ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.