ನವಲಗುಂದ:

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ರೋಗಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ತಹಸೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಮಾಬುಸಾಬ್‌ ಯರಗುಪ್ಪಿ ಮಾತನಾಡಿ, ತುರ್ತು ಚಿಕಿತ್ಸಾ ಘಟಕದಲ್ಲಿ ಜೀವ ಉಳಿಸುವ ವೈದ್ಯಕೀಯ ಉಪಕರಣಗಳು ಕಾರ್ಯನಿರ್ವಹಿಸಲು ವಿದ್ಯುತ್ ಅತ್ಯಗತ್ಯ, ಆದರೆ, ತಾಲೂಕಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಕಳೆದ ಭಾನುವಾರ ರಾತ್ರಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕತ್ತಲಿನಲ್ಲಿ ಚಿಕಿತ್ಸೆ ನೀಡುವುದು ವೈದ್ಯರಿಗೂ ಕಷ್ಟಕರವಾಗಿದ್ದು ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಇಂತಹ ಕನಿಷ್ಠ ಸೌಲಭ್ಯವೂ ಸಿಗದಿರುವುದು ಅತ್ಯಂತ ಖೇದಕರ. ಆಸ್ಪತ್ರೆಯಲ್ಲಿ ಜನರೇಟರ್ ಇದ್ದರೂ ಅದು ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸದಿರುವುದು ಸಿಬ್ಬಂದಿಗಳ ನಿರ್ಲಕ್ಷ್ಯ ತೋರಿಸುತ್ತದೆ. ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯು ಸುತ್ತಮುತ್ತಲಿನ ನೂರಾರು ಹಳ್ಳಿಗಳ ಬಡ ಜನರಿಗೆ ಜೀವನಾಡಿಯಾಗಿದೆ. ಆದರೆ, ಈ ಆಸ್ಪತ್ರೆಯ ''''''''ತುರ್ತು ಚಿಕಿತ್ಸಾ ಘಟಕ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಮುಳುಗಿದೆ ಎಂದು ಕಿಡಿಕಾರಿದರು.

ಈ ವೇಳೆ ಮಲ್ಲಿಕಾರ್ಜುನಸ್ವಾಮಿ ಮಠಪತಿ, ಬಸವರಾಜ ಮಲ್ಲದಾಸರ, ಹನುಮಂತಪ್ಪ ಹುಳಕಣ್ಣವರ, ಕುಮಾರ ಹೊಣಕುದರಿ ಇತರರು ಇದ್ದರು.ಕನ್ನಡಪ್ರಭ ಇತ್ತೀಚಿಗೆ ಈ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದನ್ನು ಗಮನಿಸಬಹುದು.