ಲಿಂಗಾಯತ ಒಂದು ಧರ್ಮವಲ್ಲ ಎಂಬ ರಂಭಾಪುರಿ ಶ್ರೀವೀರಸೋಮೇಶ್ವರ ಸ್ವಾಮೀಜಿ ಹೇಳಿಕೆಗೆ ಖಂಡನೆ

| N/A | Published : Mar 06 2025, 12:33 AM IST / Updated: Mar 06 2025, 12:40 PM IST

Lingayata meet
ಲಿಂಗಾಯತ ಒಂದು ಧರ್ಮವಲ್ಲ ಎಂಬ ರಂಭಾಪುರಿ ಶ್ರೀವೀರಸೋಮೇಶ್ವರ ಸ್ವಾಮೀಜಿ ಹೇಳಿಕೆಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

“ಲಿಂಗಾಯತ ಒಂದು ಧರ್ಮವಲ್ಲ” ಎಂದು ಹೇಳಿದ್ದಲ್ಲದೇ ನಾಡಿನ ಬಹುದೊಡ್ಡ ವಿದ್ವಾಂಸರೂ, ಬಸವ ಸಾಕ್ಷಿಯಂತಿರುವ 94 ವರ್ಷದ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಅವರನ್ನು “ವಯೋವೃದ್ಧ, ಅವನಿಗೆ ಧರ್ಮದ ಇತಿಹಾಸವೇ ಗೊತ್ತಿಲ್ಲ” ಎಂದು ಏಕವಚನದಲ್ಲಿ ಕರೆದಿದ್ದಾರೆ.

ಕೊಪ್ಪಳ:  ‘ವಚನ ದರ್ಶನ ಮಿಥ್ಯ ವರ್ಸಸ್‌ ಸತ್ಯ'''' ಕೃತಿಯ ಬಿಡುಗಡೆ ಸಮಾರಂಭವು ಅರ್ಥಗರ್ಭಿತವಾಗಿ ಯಶಸ್ವಿಯಾಗಿದ್ದನ್ನು ಸಹಿಸದೇ, ಅಸಹನೆಯಿಂದ ಬಾಳೆಹೊನ್ನೂರು ರಂಭಾಪುರಿ ಶ್ರೀವೀರಸೋಮೇಶ್ವರ ಸ್ವಾಮೀಜಿ ಅವರ ಮಾತುಗಳು ಅವರ ಸಣ್ಣತನ ತೋರಿಸುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೊಪ್ಪಳ ಜಿಲ್ಲಾ ಘಟಕ ಖಂಡಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಘಟಕವು, ರಂಭಾಪುರಿ ಶ್ರೀಗಳು “ಲಿಂಗಾಯತ ಒಂದು ಧರ್ಮವಲ್ಲ” ಎಂದು ಹೇಳಿದ್ದಲ್ಲದೇ ನಾಡಿನ ಬಹುದೊಡ್ಡ ವಿದ್ವಾಂಸರೂ, ಬಸವ ಸಾಕ್ಷಿಯಂತಿರುವ 94 ವರ್ಷದ ಸಾಹಿತಿ ಡಾ. ಗೊ.ರು. ಚನ್ನಬಸಪ್ಪ ಅವರನ್ನು “ವಯೋವೃದ್ಧ, ಅವನಿಗೆ ಧರ್ಮದ ಇತಿಹಾಸವೇ ಗೊತ್ತಿಲ್ಲ” ಎಂದು ಏಕವಚನದಲ್ಲಿ ಕರೆದಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಶ್ರೀಗಳು, ಕನ್ನಡ ನಾಡಿಗೆ, ಶರಣ ಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿರುವ ಗೊರುಚರಂಥ ಹಿರಿಯರಿಗೆ ಅಪಚಾರ ಮಾಡಿದ್ದಾರೆ ಎಂದು ಕಿಡಿಕಾರಿದೆ.

‘ಲಿಂಗಾಯತ - ಒಂದು ಸ್ವತಂತ್ರ ಧರ್ಮ'''' ಮಾನ್ಯತೆ ಪಡೆಯುವಲ್ಲಿ ಧನಾತ್ಮಕವಾಗಿ ಸಾಗುತ್ತಿದ್ದು, ಇದನ್ನು ಸಹಿಸದೇ ಈ ರೀತಿಯ ಹೇಳಿಕೆ ನೀಡುತ್ತಿರುವುದು ಸಮಾಜದ ಹಿತ-ದೃಷ್ಟಿಯಿಂದ ಒಳ್ಳೆಯದಲ್ಲ. ಕಾರ್ಯಕ್ರಮದಲ್ಲಿ ಶಂಕರ ಬಿದರಿ ಅವರು ರೇಣುಕಾಚಾರ್ಯರ ಭಾವಚಿತ್ರದ ಪ್ರತಿ ಮುದ್ರಿಸಿ ಹಂಚುತ್ತೇನೆ ಎಂದೂ ಹೇಳಿಯೇ ಇಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ರಂಭಾಪುರಿ ಶ್ರೀಗಳು ಕಪೋಲಕಲ್ಪಿತವಾಗಿ ಕಲ್ಪಿಸಿಕೊಂಡು ಮಾತನಾಡುತ್ತಿದ್ದಾರೆ. ಬಸವ ಜಯಂತಿ ದಿನವೇ ಎಲ್ಲ ಶರಣರ ಜಯಂತಿಯನ್ನೂ ಒಂದೇ ದಿನ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ ಅಷ್ಟೇ. ಗೊರುಚ, “ಲಿಂಗಾಯತ ಪದವನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದರೆ ''''ವೀರಶೈವ'''' ಪದಬಳಕೆ ನಾಲ್ಕೈದು ವರ್ಷಗಳಲ್ಲಿ ಕಡಿಮೆಯಾಗುತ್ತದೆ” ಎಂದು ಹೇಳಿದ್ದಾರೆ ಮತ್ತು ಈ ಮಾತು ನಿಜವೂ ಆಗಿದೆ. ಆದರೆ, ಸಮಾರಂಭವನ್ನು ಸರಿಯಾಗಿ ಗ್ರಹಿಸದೇ ರಂಭಾಪುರಿ ಶ್ರೀಗಳು ಪೂರ್ವಾಗ್ರಹಪೀಡಿತರಾಗಿ ತಪ್ಪು ಸಂದೇಶ ಕೊಡುತ್ತಿದ್ದಾರೆ ಎಂದು ಘಟಕವು ಅಸಮಾಧಾನ ವ್ಯಕ್ತಪಡಿಸಿದೆ.

ಬಸವಣ್ಣನವರನ್ನು ಮನೆ-ಮನಗಳಿಗೆ ತಲುಪಿಸುವ ಮತ್ತು ಸಮಾಜ ಒಗ್ಗೂಡಿಸುವ ಕೆಲಸದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಸಣ್ಣ ಅವಧಿಯಲ್ಲಿಯೇ ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಇವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಗೊರುಚ ಮತ್ತಿತರ ಹಿರಿಯರ ಕುರಿತಾಗಿ ಮತ್ತು ಜಾಗತಿಕ ಲಿಂಗಾಯತ ಮಹಾಸಭೆ ಕುರಿತು ಮಾತನಾಡುವಾಗ ಗೌರವದಿಂದ ಮಾತನಾಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಉಪಾಧ್ಯಕ್ಷ ಬಸವರಾಜ ಬಳ್ಳೊಳ್ಳಿ, ರಾಜ್ಯ ಕಾರ್ಯದರ್ಶಿ ಗವಿಸಿದ್ಧಪ್ಪ ಕೊಪ್ಪಳ, ಕೊಪ್ಪಳ ಜಿಲ್ಲಾಧ್ಯಕ್ಷ ಹನುಮೇಶ ಕಲ್ಮಂಗಿ, ಪ್ರಧಾನ ಕಾರ್ಯದರ್ಶಿ ರಾಜೇಶ ಸಸಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.