ಧರ್ಮಸ್ಥಳ, ಧರ್ಮಾಧಿಕಾರಿಗಳ ಕುಟುಂಬಸ್ಥರ ವಿರುದ್ಧ ಅಪಪ್ರಚಾರಕ್ಕೆ ಖಂಡನೆ

| Published : Aug 21 2025, 01:00 AM IST

ಧರ್ಮಸ್ಥಳ, ಧರ್ಮಾಧಿಕಾರಿಗಳ ಕುಟುಂಬಸ್ಥರ ವಿರುದ್ಧ ಅಪಪ್ರಚಾರಕ್ಕೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದಕ್ಕಾಗಿ ಒಂದು ತಂಡ ಷಡ್ಯಂತ್ರ ರೂಪಿಸಿ ಕೆಲಸ ಮಾಡುತ್ತಿದೆ. ಯಾವುದೇ ಪ್ರಕರಣದ ಬಗ್ಗೆ ತನಿಖೆ ನಡೆಸಲು ನಮ್ಮದೇನೂ ಅಭ್ಯಂತರವಿಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಗೆ ಒಳಪಡಿಸಲಿ. ವಿನಾಕಾರಣ ಧರ್ಮಸ್ಥಳದ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬಸ್ಥರ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಶ್ರೀಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಕುವೆಂಪು ಪ್ರತಿಮೆ ಎದುರು ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಮಹಿಳಾ ಪ್ರತಿಭಟನಕಾರರು ಸೇರಿ ಸಾಮಾಜಿಕ ಜಾಲತಾಣಗಳಿಗೆ ಕಡಿವಾಣ ಹಾಕಿ ಶ್ರೀಕ್ಷೇತ್ರಕ್ಕಾಗಿ ಬದ್ಧ, ತ್ಯಾಗಕ್ಕೂ ಸಿದ್ಧ, ಡಾ.ವೀರೇಂದ್ರ ಹೆಗ್ಗಡೆ ಅವರೊಂದಿಗೆ ನಾವಿದ್ದೇವೆ, ಅಪಪ್ರಚಾರ ನಿಲ್ಲಿಸಿ ನಿಲ್ಲಿಸಿ ಎಂದು ಘೋಷಣೆ ಕೂಗಿದರು.

ಹಿಂದೂ ದೇವಾಲಯಗಳನ್ನು ರಕ್ಷಿಸಿ ಧರ್ಮಸ್ಥಳದ ವಿರುದ್ಧ ಅಪ ಪ್ರಚಾರ ಮಾಡುವವರನ್ನು ಬಂಧಿಸಿ ಎಂಬ ಘೋಷಣೆಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಭಿತ್ತಿಫಲಕಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇದಕ್ಕೂ ಮುನ್ನ ತಾಲೂಕು ಕಚೇರಿ ಬಳಿ ಶಾಂತಿಯುತವಾಗಿ ಕುಳಿತು ಧರಣಿ ನಡೆಸಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದಕ್ಕಾಗಿ ಒಂದು ತಂಡ ಷಡ್ಯಂತ್ರ ರೂಪಿಸಿ ಕೆಲಸ ಮಾಡುತ್ತಿದೆ. ಯಾವುದೇ ಪ್ರಕರಣದ ಬಗ್ಗೆ ತನಿಖೆ ನಡೆಸಲು ನಮ್ಮದೇನೂ ಅಭ್ಯಂತರವಿಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಗೆ ಒಳಪಡಿಸಲಿ. ವಿನಾಕಾರಣ ಧರ್ಮಸ್ಥಳದ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಾಧಿಕಾರಿಗಳ ವಿರುದ್ಧ ಆಕ್ಷೇಪಾರ್ಹ, ನಿಂದನೆಯ ಮಾತುಗಳನ್ನಾಡುವುದನ್ನು ತಡೆಯಬೇಕು. ಕೆಲವರು ಧರ್ಮದ ಮೇಲೆ ಅಪನಂಬಿಕೆ ಮೂಡಿಸುವ ರೀತಿಯಲ್ಲಿ ಸುಳ್ಳು ಸುಳ್ಳು ವಿಚಾರ ಹರಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕ್ಷೇತ್ರದಲ್ಲಿ ತಪ್ಪು ಮಾಡುವುದಕ್ಕೆ ಸಾಧ್ಯವಿಲ್ಲ. ತಪ್ಪು ನಡೆಯುವುದಕ್ಕೂ ಅವಕಾಶವಿಲ್ಲ. ಇಂತಹ ಧಾರ್ಮಿಕ ಮತ್ತು ಪುಣ್ಯಕ್ಷೇತ್ರದ ಮೇಲೆ ಕೆಲವರು ಸುಮ್ಮನೆ ಮಾತನಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಪಪ್ರಚಾರ ತಡೆಯಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಸಾಮೂಹಿಕವಾಗಿ ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರು ತಾಲೂಕು ಆಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರವನ್ನು ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ನಗುವನಹಳ್ಳಿ ಶಿವಣ್ಣ, ನಳಿನಿ, ಎನ್.ಸರಸ್ವತಿ, ಕರವೇ ಚಂದಗಾಲ ಶಂಕರ್, ಮರವೇ ಶಂಕರ್ ಬಾಬು, ವಕೀಲ ರವೀಶ್, ಬಿ.ವಿ.ಉಮೇಶ್, ಗೀತಾ ರಮೇಶ್, ನಾಗರಾಜ್, ಮಹದೇವು, ವಿಶಾಲಾಕ್ಷಿ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.