ಸರ್ಕಾರದ ಜನವಿರೋಧಿ ನೀತಿಗೆ ಖಂಡನೆ

| Published : Jan 22 2025, 12:30 AM IST

ಸಾರಾಂಶ

ಚಿಂತಾಮಣಿ ಗಡಿ ತಾಲ್ಲೂಕಾಗಿದ್ದು ಕನ್ನಡಪರ ಸಂಘಟನೆಗಳು ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಿರುವ ಕನ್ನಡ ಭವನ ನಿರ್ಮಾಣಕ್ಕೆ ಒತ್ತಾಯಿಸಿ ೧೨ ವರ್ಷಗಳಿಂದ ಪ್ರತಿಭಟನೆ, ಮನವಿಪತ್ರ, ಬೈಕ್ ರ‍್ಯಾಲಿ ನಡೆಸಿದರೂ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಕನ್ನಡ ವಿರೋಧಿ ನೀತಿಯನ್ನು ಮುಂದುವರೆಸಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜನ ವಿರೋಧಿ ನೀತಿಯಿಂದ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದ್ದು ಜನಸಾಮಾನ್ಯರ ಜೀವನ ಏರುಪೇರಾಗುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಕರವೇ ಸ್ವಾಭಿಮಾನ ಬಣದ ಅಗ್ರಹಾರ ಮೋಹನ್, ಕರವೇ ಪ್ರವೀಣ್‌ಶೆಟ್ಟಿ ಬಣದ ಕೃಷ್ಣೋಜಿರಾವ್, ಮತ್ತು ಆಸಿಫ್, ಕರವೇ ಶಿವರಾಮೇಗೌಡ ಬಣದ ಶ್ರೀರಾಮನಗರ ಶಂಕರ್, ಕನ್ನಡ ಜಾಗೃತಿ ವೇದಿಕೆಯ ಜಿ.ಎನ್.ಮಂಜುನಾಥ್, ಜೈ ಕರ್ನಾಟಕ ಸತ್ಯನಾರಾಯಣ ಸಿಂಗ್, ಕನ್ನಡ ಸೇನೆಯ ಪ್ರಕಾಶ್ ಮತ್ತಿತರರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಘೋಷಣೆ ಕೂಗಿದರು.

ಕನ್ನಡಭವನ ಕಟ್ಟಲು ಆಗ್ರಹ

ಚಿಂತಾಮಣಿ ಗಡಿ ತಾಲ್ಲೂಕಾಗಿದ್ದು ಕನ್ನಡಪರ ಸಂಘಟನೆಗಳು ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಿರುವ ಕನ್ನಡ ಭವನ ನಿರ್ಮಾಣಕ್ಕೆ ಒತ್ತಾಯಿಸಿ ೧೨ ವರ್ಷಗಳಿಂದ ಪ್ರತಿಭಟನೆ, ಮನವಿಪತ್ರ, ಬೈಕ್ ರ‍್ಯಾಲಿ ನಡೆಸಿದರೂ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಕನ್ನಡ ವಿರೋಧಿ ನೀತಿಯನ್ನು ಮುಂದುವರೆಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಶಾಲೆಗಳಲ್ಲಿ ಕನ್ನಡ ಕಡೆಗಣಿಸಿ ಆಂಗ್ಲ ಭಾಷೆಗೆ ಪ್ರಾಮುಖ್ಯತೆ ನೀಡುತ್ತಿವೆ. ಇಂತಹ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ತಹಶೀಲ್ದಾರ್ ಸುದರ್ಶನ್ ಯಾದವ್‌ರಿಗೆ ಮನವಿ ಸಲ್ಲಿಸಿದರು.