ಸಾರಾಂಶ
ನೋಟಿಸ್ ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ.ಎಚ್. ಲಕ್ಷ್ಮಣ್ । ಸಿಎಂಗೆ ರಾಜ್ಯಪಾಲರ ನೋಟಿಸ್ ವಿರೋಧಿಸಿ ಕೈ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹಾಸನಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿರುವುದು ಸರಿಯಿಲ್ಲ. ಕೂಡಲೇ ಈ ನೋಟಿಸ್ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್. ಲಕ್ಷ್ಮಣ್ ಮಾತನಾಡಿ, ಸಂವಿಧಾನ ಕಾಪಾಡಬೇಕೆಂದು ರಾಜ್ಯಪಾಲರನ್ನು ನೇಮಿಸಿದರೆ ಅವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರವನ್ನು ಅಭದ್ರಗೊಳಿಸಬೇಕು ಎಂಬ ಉದ್ದೇಶ ಹೊಂದಿದ್ದಾರೆ. ೪೦ ವರ್ಷಗಳ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಒಂದು ಸಣ್ಣ ಕಳಂಕ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರನ್ನು ಮಣಿಸಲು ಸಾಧ್ಯವಿಲ್ಲ ಎಂದು ತಿಳಿದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಮುಡಾ ಹಗರಣ ರುವಾರಿ ಎಂದು ಹೇಳಿಕೊಂಡು ಜನರ ಮುಂದೆ ಹೋಗುತ್ತಿರುವುದಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಡಾದಲ್ಲಿ ಸೈಟ್ ಕೊಟ್ಟಿರುವುದು ಕಾಂಗ್ರೆಸ್ ಪಕ್ಷವಲ್ಲ. ಬಿಜೆಪಿ ಸರಕಾರವೇ ಇದ್ದಾಗ ಬಿಜೆಪಿ ಕಮಿಟಿಯವರು ಕೊಟ್ಟ ನಿವೇಶನವಾಗಿದೆ. ಮುಡಾ ನಿವೇಶನದಲ್ಲಿ ಸಿದ್ದರಾಮಯ್ಯನವರ ಪಾತ್ರವಿರದಿದ್ದರೂ ಉದ್ದೇಶಪೂರ್ವಕವಾಗಿ ಅವರನ್ನು ತೇಜೋವಧೆ ಮಾಡಿ ಸರಕಾರವನ್ನು ಅಭದ್ರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದು ಅಸಾಧ್ಯ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಪಾಲರು ಅಸಂವಿಧಾನಿಕವಾಗಿ ನೋಟಿಸ್ ಕೊಟ್ಟಿದ್ದಾರೆ. ರಾಜ್ಯಪಾಲರು ಹಿಂದೆ ಬಿಜೆಪಿಯ ಹಗರಣಗಳ ಮೇಲೆ ಏಕೆ ನೋಟಿಸ್ ಕೊಡಲಿಲ್ಲ? ಯಾರಿಗೂ ಒಬ್ಬರಿಗೆ ಕೈಗೊಂಬೆಯಾಗಿ ರಾಜ್ಯಪಾಲರು ಕೆಲಸ ಮಾಡಬಾರದು. ಸಂವಿಧಾನ ಉಳಿಸುವುದಕ್ಕೆ ನೀವು ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಕೆಲಸ ಮಾಡಲು ಬಂದಿರುವುದು. ನೀವು ಒಬ್ಬರಿಗೆ ಏಜೆಂಟ್ ಅಲ್ಲ. ಕೂಡಲೇ ಕೊಟ್ಟಿರುವ ನೋಟಿಸನ್ನು ರಾಜ್ಯಪಾಲರು ಹಿಂಪಡೆಯಬೇಕು. ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ಆಗಸ್ಟ್ ೬ರ ಮಂಗಳವಾರ ಮಂಡ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಆಗಸ್ಟ್ ೭ರ ಬುಧವಾರದಂದು ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶವನ್ನು ಏರ್ಪಡಿಸಿದ್ದು, ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಶಕ್ತಿ ಪ್ರದರ್ಶಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ನಾಡಿನ ಮುಖ್ಯಮಂತ್ರಿಗಳ ಬಗ್ಗೆ ಕೇವಲವಾಗಿ ಮಾತನಾಡಿರುವವರಿಗೆ ನಮ್ಮ ಧಿಕ್ಕಾರ. ಬಿಜೆಪಿಗರು ಕೇಂದ್ರದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮಾರ್ಗದರ್ಶನದಲ್ಲಿ ಹೋರಾಟ ಮಾಡಲು ಹೊರಟಿದ್ದಾರೆ. ಈ ಹೋರಾಟ ಪ್ರಜಾಪ್ರಭುತ್ವದ ಕಗ್ಗೂಲೆ. ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ನಮ್ಮ ಮನವಿ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಮಾತನಾಡಿ, ರಾಜ್ಯಪಾಲರ ಹುದ್ದೆಯೆಂದರೆ ಸಂವಿಧಾನಿಕ ಹುದ್ದೆಯಾಗಿದ್ದು, ಅದನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಸನ್ಮಾನ್ಯ ಸಿದ್ದರಾಮಯ್ಯನವರು ರಾಜ್ಯದ ೧೩೭ ಶಾಸಕರ ಬಲದಿಂದ ಸಿಎಂ ಆಗಿ ಆಯ್ಕೆ ಆಗಿರುತ್ತಾರೆ. ಬಿಜೆಪಿ, ಜೆಡಿಎಸ್ ಸಿದ್ದರಾಮಯ್ಯನವರ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದಕ್ಕೆ ಅವರಿಗೆ ಯಾವುದೇ ಹಕ್ಕಿಲ್ಲ, ಇವರ ಹಗರಣಗಳೇ ನೂರಾರು ಇದೆ. ಇಂತಹ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮಹೇಶ್, ಮುಖಂಡರಾದ ಎಚ್.ಕೆ. ಜವರೇಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಣ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಗೌಡಗೆರೆ ಪ್ರಕಾಶ್, ತಾರಚಂದನ್, ಜಮೀಲಾ, ಗೊರೂರು ರಾಜು, ಅಶೋಕ್, ರಘು ದಾಸರಕೊಪ್ಪಲು, ಹೊಳೆನರಸೀಪುರದ ಲಕ್ಷ್ಮಣ್, ಕೊಲ್ಲಹಳ್ಳಿ ಸಲೀಂ, ಪ್ರವೀಣ್ ಇತರರು ಉಪಸ್ಥಿತರಿದ್ದರು.-------
ಸಿಎಂ ಸಿದ್ಧರಾಮಯ್ಯನವರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಮುಖಂಡರು ಡೀಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.