ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಲಾಯಿತು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಚಿಂತಕ ಜೆ.ಯಾದವರೆಡ್ಡಿ, ಪ್ರತಿಭಟನಾಕಾರರನ್ನು ಕೇಂದ್ರ ಸರ್ಕಾರ ಕ್ರಿಮಿನಲ್ಸ್ ತರ ನೋಡುತ್ತಿರುವುದು ಸರಿಯಲ್ಲ. ದೆಹಲಿಯಲ್ಲಿ ಹದಿಮೂರು ತಿಂಗಳುಗಳ ಕಾಲ ಚಳವಳಿ ನಡೆಸಿದ ರೈತರ ಮೇಲೆ ಅಶ್ರುವಾಯು, ಜಲಪಿರಂಗಿ ಪ್ರಯೋಗಿಸಿದ ಕೇಂದ್ರ ಸರ್ಕಾರ ರೈತರ ಹಕ್ಕನ್ನು ಧಮನ ಗೊಳಿಸುವಲ್ಲಿ ಸೋತು ಕೊನೆಗೆ ಮೂರು ಕರಾಳ ಕಾಯಿದೆಗಳನ್ನು ಹಿಂದಕ್ಕೆ ಪಡೆಯಿತು. ಏಳು ನೂರು ರೈತರು ಹುತಾತ್ಮರಾದರು. ಬೆಂಬಲ ಬೆಲೆ ಘೋಷಿಸುವಂತೆ ರೈತರು ಕೇಳುತ್ತಿರುವ ಬೇಡಿಕೆ ನ್ಯಾಯಯುತವಾಗಿದೆ ಎನ್ನುವ ಜ್ಞಾನ ಆಳುವ ಸರ್ಕಾರಗಳಿಗೆ ಇಲ್ಲದಿರುವುದು ನೋವಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೆಂಬಲ ಬೆಲೆ ಘೋಷಿಸುವಲ್ಲಿ ಸಮಿತಿ ರಚಿಸುವುದಾಗಿ ಹೇಳಿರುವ ಕೇಂದ್ರ ಸರ್ಕಾರ 38 ಸಭೆಗಳನ್ನು ನಡೆಸಿದೆ. ಇದುವರೆವಿಗೂ ಸಮಿತಿ ರಚಿಸಿಲ್ಲ. ರೈತ ಸಾಲ ಮನ್ನಾಗೆ ಹಿಂದೇಟು ಹಾಕುವ ಕೇಂದ್ರಕ್ಕೆ ಕಾರ್ಪೊರೇಟ್ ಕುಳಗಳ ಸಾಲ ಮನ್ನ ಮಾಡುವಾಗ ಆರ್ಥಿಕ ಹೊರೆಯಾಗುತ್ತದೆಂಬ ಅರಿವು ಕೇಂದ್ರಕ್ಕೆ ಇರಲಿಲ್ಲವೇ? ಎಂದು ಪ್ರಶ್ನಿಸಿದರು.
ರೈತರಿಗೆ ಬೆಂಬಲ ಬೆಲೆ ನೀಡಲು ಪ್ರತಿ ವರ್ಷ ಎರಡು ಲಕ್ಷ ಕೋಟಿ ರು. ಸಾಕು. ರೈತ ಸಂತಾನ ಉಳಿಯಬೇಕಾಗಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಪ್ರಧಾನಿ ನರೇಂದ್ರಮೋದಿ ಸಂವಿಧಾನ, ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾರು ನೆಮ್ಮದಿಯಿಂದ ಬದುಕುತ್ತಿಲ್ಲ. ಕರ್ನಾಟಕಕ್ಕೆ ಪರಮ ಅನ್ಯಾಯವಾಗಿದೆ. ಭದ್ರಾಮೇಲ್ದಂಡೆ ಯೋಜನೆಗೆ ಐದು ಸಾವಿರದ ಮುನ್ನೂರು ಕೋಟಿ ರು.ಗಳನ್ನು ಕಾಯ್ದಿರಿಸಿರುವ ಕೇಂದ್ರ ಸರ್ಕಾರ ಹಣ ಬಿಡುಗಡೆ ಗೊಳಿಸಲು ಆಸಕ್ತಿ ತೋರುತ್ತಿಲ್ಲ. ಮೇಕೆದಾಟು, ಮಹದಾಯಿ, ಕಾವೇರಿ ಕೊಳ್ಳಗಳಿಗೆ ದ್ರೋಹವೆಸಗುತ್ತಿದೆ. ಪ್ರಧಾನಿಯಾದವರು ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು ಎಂದು ಒತ್ತಾಯಿಸಿದರು.ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸಿ ಬಡವರು ಬದುಕಲು ಅವಕಾಶ ಕಲ್ಪಿಸಬೇಕು. ರೈಲ್ವೆ, ವಿದ್ಯುತ್, ವಿಮಾನ ಇವೆಲ್ಲವುಗಳನ್ನು ಖಾಸಗಿಕರಣಗೊಳಿಸಿರುವ ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸುವಂತೆ ಆಗ್ರಹಿಸಿದರು.
ಡಾ.ಸ್ವಾಮಿನಾಥನ್ ವರದಿಯಂತೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ರಚಿಸಿ ಕೃಷಿ ಕಾರ್ಮಿಕರಿಗೆ ಸಮಗ್ರ ಕಲ್ಯಾಣ ಯೋಜನೆಗಳನ್ನು ರೂಪಿಸುವಂತೆ ಮನವಿ ಮಾಡಿದರು.ಎಐಟಿಯುಸಿ ಜಿಲ್ಲಾಧ್ಯಕ್ಷ ರವಿಕುಮಾರ್, ಕರ್ನಾಟಕ ಜನಶಕ್ತಿಯ ಟಿ.ಶಫಿವುಲ್ಲಾ, ಟಿ.ಆರ್.ಉಮಾಪತಿ, ಅಬ್ದುಲ್ಲಾ, ರಾಘವೇಂದ್ರ, ಕರಿಯಪ್ಪ, ಹೆಚ್.ಮಂಜುನಾಥ, ಆಯಿಷ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.