ಸಾರಾಂಶ
ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್ ಡಾ.ಸುಮಂತ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಯುಗ ಪುರುಷ ಎಂದು ಖ್ಯಾತರಾದ ಸವಿತಾ ಮಹರ್ಷಿಗಳ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದು ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ಡಾ.ಸುಮಂತ್ ಹೇಳಿದರು.ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ಇತರರಿಗೆ ದಾರಿದೀಪವಾಗಿದ್ದಾರೆ. ಇಂತಹ ಮಹಾತ್ಮರ ಜಯಂತಿ ಆಚರಿಸುವ ಮೂಲಕ ಸರ್ಕಾರ ಇವರ ಆದರ್ಶಗಳನ್ನು ಇಂದಿನ ಜನತೆ ಆಳವಡಿಸಿಕೊಂಡು ನಡೆಯಲು ಬೆಳಕು ತೋರಿಸಿದೆ ಎಂದರು. ಸವಿತಾ ಸಮಾಜವು ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ವರ್ಗವಾಗಿದ್ದು, ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಸರ್ಕಾರದ ಉದ್ದೇಶವಾಗಿದೆ. ಈ ವರ್ಗದವರಿಗೆ ಸರ್ಕಾರ ಹಲವಾರು ಸೌಲಭ್ಯ ನೀಡಿದ್ದು, ಈ ಸವಲತ್ತು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು.ಸಾಹಿತಿ ಚಟ್ನಳ್ಳಿ ಮಹೇಶ್ ಸವಿತಾ ಮಹರ್ಷಿ ಕುರಿತು ವಿಶೇಷ ಉಪನ್ಯಾಸ ನೀಡಿ, ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದವರು ಮಹಾಪುರುಷರು, ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ ಅದು ತನ್ನದೇ ಆದ ಶ್ರೇಷ್ಠತೆ ಹೊಂದಿದೆ. ಕಾಯಕ ಹೀನನಾದರೆ ಬದುಕಿಗೆ ಅರ್ಥವಿರುವುದಿಲ್ಲ. ಪ್ರತಿಯೊಬ್ಬರಿಗೂ ತಾವು ಮಾಡುವ ವೃತ್ತಿ ಬಗ್ಗೆ ಗೌರವವಿರಬೇಕು ಎಂದು ಹೇಳಿದರು.
ಸವಿತಾ ಮಹರ್ಷಿಗಳು ಸಮಾಜದ ವ್ಯಕ್ತಿಯ ನಾಡಿ ಮಿಡಿತ ಗ್ರಹಿಸುವ ಶಕ್ತಿ ಹೊಂದಿದ್ದರು. ಪ್ರತಿಯೊಬ್ಬರು ತಮ್ಮ ವೃತ್ತಿಯನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವ ಮೂಲಕ ಜನ ಪ್ರೀತಿಗೆ ಪಾತ್ರರಾಗಬೇಕು ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಉಪ ವಿಭಾಗಾಧಿಕಾರಿಗಳ ಕಚೇರಿಯ ಉಪ ತಹಸೀಲ್ದಾರ್ ಶಾರದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಹಾಗೂ ಸವಿತಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.