ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ಆಯೋಜನೆಗೆ ಶರತ್ತು: ಸುನಿಲ್‌ ಆಕ್ಷೇಪ

| Published : Oct 17 2025, 01:03 AM IST

ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ಆಯೋಜನೆಗೆ ಶರತ್ತು: ಸುನಿಲ್‌ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಕೈಗೊಂಡ ತೀರ್ಮಾನ ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಸಂಪೂರ್ಣವಾಗಿ ನಿರಾಕರಿಸುವ ಪ್ರಯತ್ನ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಕಾರ್ಕಳ: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಮತ್ತು ಇತರೆ ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ವಿಧಿಸಿರುವ ಹೊಸ ನಿರ್ಬಂಧದ ವಿರುದ್ಧ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ಸಂಬಂಧ ತೀರ್ಮಾನ ಕೈಗೊಂಡಿದ್ದು, ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಸಂಪೂರ್ಣವಾಗಿ ನಿರಾಕರಿಸುವ ಪ್ರಯತ್ನ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.ಸರ್ಕಾರಿ ಶಾಲಾ ಆವರಣದಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆಗೆ ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಖಾಸಗಿ ವ್ಯಕ್ತಿಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಈ ಕ್ರಮದ ಹಿಂದೆ ಸರ್ಕಾರದ ಉದ್ದೇಶವೇನು ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.ಗ್ರಾಮೀಣ ಸರ್ಕಾರಿ ಶಾಲೆಗಳು ಕೇವಲ ಪಾಠ ಮಾಡುವ ಸ್ಥಳವಲ್ಲ. ಅದು ಸಮಾಜದ ಹೃದಯ ಕೇಂದ್ರ. ಅಲ್ಲಿ ವಾರಾಂತ್ಯಗಳಲ್ಲಿ ಸಂಘ-ಸಂಸ್ಥೆಗಳ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ನಡೆಯುತ್ತವೆ. ಈ ಚಟುವಟಿಕೆಗಳನ್ನೇ ಸರ್ಕಾರ ನಿಷೇಧಿಸಲು ಹೊರಟಿದೆಯೇ? ಇದು ಸಾರ್ವಜನಿಕರನ್ನು ಸರ್ಕಾರಿ ಶಾಲೆಗಳಿಂದ ದೂರ ಇಡುವ, ಮತ್ತು ಅವುಗಳನ್ನು ಕ್ರಮೇಣ ಮುಚ್ಚುವ ನಿಗೂಢ ಹುನ್ನಾರವಾಗಿದೆ ಎಂದು ಅವರು ದೂರಿದ್ದಾರೆ.

ಸರ್ಕಾರದ ಈ ತೀರ್ಮಾನವನ್ನು ಅವರು ಬಾಲಿಶ ಹಾಗೂ ಜನವಿರೋಧಿ ಕ್ರಮವೆಂದು ತೀವ್ರವಾಗಿ ಖಂಡಿಸಿದರು.