ಸಾರಾಂಶ
ಅಸ್ಪೃಶ್ಯತೆ ಆಚರಣೆ ಕಂಡು ಬಂದರೆ ಸೂಕ್ತ ಕಾನೂನು ಕ್ರಮ: ಸಚಿವ ಶಿವರಾಜ ತಂಗಡಗಿ
ಕನ್ನಡಪ್ರಭ ವಾರ್ತೆ ಯಲಬುರ್ಗಾಕ್ಷೌರ ಮಾಡಿಸಿಕೊಳ್ಳಲು ಬಂದ ದಲಿತ ಯುವಕನಿಗೆ ಕ್ಷೌರ ನಿರಾಕರಿಸಿದ್ದಲ್ಲದೇ ಕತ್ತರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ತಾಲೂಕಿನ ಸಂಗನಾಳ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದ ರಾಜಶೇಖರ್ ಹಿಟ್ನಾಳ ಸೋಮವಾರ ಭೇಟಿ ನೀಡಿ ಮೃತ ದಲಿತ ಯುವಕ ಯಮನೂರಪ್ಪ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ದಲಿತ ಯುವಕನ ಕೊಲೆ ಮಾಡಿರುವುದು ಅತ್ಯಂತ ಹೀನ ಕೃತ್ಯವಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಆರೋಪಿಗೆ ಸರಿಯಾದ ಶಿಕ್ಷೆಯಾಗುತ್ತದೆ. ಮೃತ ಯುವಕನ ಕುಟುಂಬಕ್ಕೆ ಸರ್ಕಾರದಿಂದ ₹೮.೨೫ ಲಕ್ಷ ಪರಿಹಾರ, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಲಾಗುವುದು. ಜಿಲ್ಲೆಯಲ್ಲಿ ಇನ್ನು ಮುಂದೆ ಇಂತಹ ಯಾವುದೇ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯವರು ಎಚ್ಚರಿಕೆ ವಹಿಸಬೇಕು. ದಲಿತರ ಮೇಲೆ ಹಲ್ಲೆ ಹಾಗೂ ಕೊಲೆ, ಅಸ್ಪೃಶ್ಯತೆ ಆಚರಣೆ ಕಂಡು ಬಂದರೆ ತಕ್ಷಣವೇ ಕ್ರಮ ಜರುಗಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆ. ಇಂತಹ ಘಟನೆ ನಡೆಯಬಾರದು. ಹೆತ್ತವರಿಗೆ ಇಂತಹ ಘಟನೆಯಿಂದ ಅರಗಿಸಿಕೊಳ್ಳಲು ಬಹಳಷ್ಟು ನೋವಾಗುತ್ತದೆ. ಆದರೂ ತಾಯಿಯಾದವರು ಸಮಾಧಾನ ತಂದುಕೊಂಡು ಆತ್ಮಸ್ಥೈರ್ಯದಿಂದ ಇರಬೇಕು. ಕೊಲೆ ಆರೋಪಿಗೆ ಕಾನೂನಿನ ಪ್ರಕಾರ ತಕ್ಕ ಶಿಕ್ಷೆಯಾಗುತ್ತದೆ. ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯದ ಜತೆಗೆ ಸರ್ಕಾರಿ ನೌಕರಿಯನ್ನು ತಿಂಗಳೊಳಗಾಗಿ ಅತ್ಯಂತ ಪ್ರಾಮಾಣಿಕವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.
ದಲಿತ ಸಂಘಟನೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ಜಿಲ್ಲೆಯಲ್ಲಿ ಅಸ್ಪೃಶ್ಯತೆ ವಿಷಯದಲ್ಲಿ ದಲಿತರ ಮೇಲೆ ಹಲ್ಲೆ, ಕೊಲೆ ಘಟನೆಗಳು ನಡೆದಿವೆ. ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಇನ್ನೂ ದಲಿತರಿಗೆ ದೇವಸ್ಥಾನ, ಹೋಟೆಲ್,. ಕ್ಷೌರ ನಿರಾಕರಣೆ ಮಾಡಲಾಗುತ್ತಿದೆ. ಇಂಥ ಹೀನಾಯ ಸ್ಥಿತಿಯಲ್ಲಿ ದಲಿತರು ಬದುಕಬೇಕಾಗಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಕಟ್ಟು ನಿಟ್ಟಿನ ಆದೇಶವನ್ನು ಅಧಿಕಾರಿಗಳಿಗೆ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಎಸ್ಪಿ ಡಾ. ರಾಮ ಅರಸಿದ್ದಿ, ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೇಶಕ ರಾಜು ತಳವಾರ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಇಒ ಸಂತೋಷ ಪಾಟೀಲ ಬಿರಾದಾರ, ತಾಲೂಕಾ ಸಮಾಜಕಲ್ಯಾಣಾಧಿಕಾರಿ ಶಶಿಧರ ಸಕ್ರಿ, ಸಿಪಿಐ ಮೌನೇಶ್ವರ ಪಾಟೀಲ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ,ಗ್ರಾಪಂ ಅಧ್ಯಕ್ಷೆ ಈಶಪ್ಪ ಕೋಳೂರ, ಪಿಡಿಒ ಇತರ ಅಧಿಕಾರಿಗಳು, ಗ್ರಾಮಸ್ಥರು, ದಲಿತ ಮುಖಂಡರು ಇದ್ದರು.
;Resize=(128,128))
;Resize=(128,128))