ಸಾರಾಂಶ
ಮಂಡ್ಯದಲ್ಲಿ 1971 ಮತ್ತು 1994ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. 2024ರ ಈ ವರ್ಷ 3ನೇ ಬಾರಿಗೆ ಸಮ್ಮೇಳನ ನಡೆಸಲು ಅವಕಾಶ ದೊರೆತಿದೆ. ಜಿಲ್ಲೆಯ ನಾಗರಿಕರು, ಸಾಹಿತ್ಯಾಭಿಮಾನಿಗಳು, ಸಾಹಿತಿಗಳು, ಸಂಘಟಕರು ಒಗ್ಗೂಡಿ ಸಮ್ಮೇಳನ ಯಶಸ್ವಿಗೊಳಿಸಿದರೆ ಜಿಲ್ಲೆಗೆ ಕೀರ್ತಿ ಬರುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡ ಭಾಷೆ ಉಳಿಸುವ ಕನ್ನಡ ಸಾಹಿತ್ಯ ಪರಿಷತ್ ಕಳೆದ 109 ವರ್ಷಗಳಿಂದ ಹಲವು ಕಾರ್ಯಕ್ರಮ ಮಾಡಿಕೊಂಡು ಬಂದಿದೆ. ಅಂತೆಯೇ ಕನ್ನಡ ಉಳಿದು ಬೆಳೆಯಬೇಕಾದರೆ ಪರಿಷತ್ ವತಿಯಿಂದ ಶಾಲೆಗೊಂದು ಕಾರ್ಯಕ್ರಮ ನಡೆಸಬೇಕು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಸಲಹೆ ನೀಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪರಿಷತ್ 110ನೇ ಸಂಸ್ಥಾಪನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸಾಪ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು ಪ್ರತಿ ಶಾಲೆಯಲ್ಲಿ ಕನ್ನಡ ಕಾರ್ಯಕ್ರಮ ನಡೆಸಿದರೆ ಮಕ್ಕಳಲ್ಲಿ ಭಾಷೆ, ಸಾಹಿತ್ಯದ ಅರಿವು ಮೂಡಿ ಪರಿಷತ್ ಉದ್ದೇಶ ಸಫಲವಾಗುತ್ತದೆ ಎಂದರು.
ನುಡಿಯ ಸಂಸ್ಥೆಯಾಗಿ ಹುಟ್ಟಿಕೊಂಡ ಕಸಾಪ, ಇಂದು ನಾಡು-ನುಡಿಯ ಸಂಸ್ಥೆಯಾಗಿ ಬೆಳೆದಿದೆ. ಕಸಾಪ ಅಧ್ಯಕ್ಷರಾಗಿದ್ದ ಜಿ. ನಾರಾಯಣರ ಕಾಲದಲ್ಲಿ ಪರಿಷತ್ ಬದಲಾವಣೆಗೆ ತೆರೆದುಕೊಂಡಿತು. ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಪರಿಷತ್ ನಗರ ಮತ್ತು ತಾಲೂಕುಗಳಿಗೆ ವಿಸ್ತರಿಸಿತು. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಆಡಳಿತದಲ್ಲಿ ಹಣಕಾಸು ಸಚಿವ ರಾಮಕೃಷ್ಣ ಹೆಗಡೆ, ಶಿಕ್ಷಣ ಸಚಿವ ಕೆ.ವಿ.ಶಂಕರಗೌಡರ ಮನವೊಲಿಸಿ ಅನುದಾನ ಪಡೆದು ಪರಿಷತ್ ಚಟುವಟಿಕೆ ವಿಸ್ತರಿಸಿದರು ಎಂದು ಸ್ಮರಿಸಿಕೊಂಡರು.ಮಂಡ್ಯದಲ್ಲಿ 1971 ಮತ್ತು 1994ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. 2024ರ ಈ ವರ್ಷ 3ನೇ ಬಾರಿಗೆ ಸಮ್ಮೇಳನ ನಡೆಸಲು ಅವಕಾಶ ದೊರೆತಿದೆ. ಜಿಲ್ಲೆಯ ನಾಗರಿಕರು, ಸಾಹಿತ್ಯಾಭಿಮಾನಿಗಳು, ಸಾಹಿತಿಗಳು, ಸಂಘಟಕರು ಒಗ್ಗೂಡಿ ಸಮ್ಮೇಳನ ಯಶಸ್ವಿಗೊಳಿಸಿದರೆ ಜಿಲ್ಲೆಗೆ ಕೀರ್ತಿ ಬರುವುದು ಎಂದರು.
ಸಮ್ಮೇಳನದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆ ಜಯದೇವಿ ತಾಯಿ ಲಿಗಾಡೆ ಅವರು ಮಂಡ್ಯದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು. ಹಾಗೆಯೇ ರಾಜ್ಯದಲ್ಲಿಯೇ ಜಿಲ್ಲಾ ಘಟಕಕ್ಕೆ ಚುನಾಯಿತ ಅಧ್ಯಕ್ಷೆಯಾಗಿ ಮೊದಲು ಆಯ್ಕೆಯಾದವರು ಡಾ. ಮೀರಾ ಶಿವಲಿಂಗಯ್ಯ ಎಂದು ಸ್ಮರಿಸಿದರು.