ಅತಿವೃಷ್ಟಿ-ಪ್ರವಾಹ ಸಂತ್ರಸ್ತರ ಸಮರ್ಪಕ ಸಮೀಕ್ಷೆ ನಡೆಸಿ: ಸಚಿವ ಸತೀಶ ಜಾರಕಿಹೊಳಿ

| Published : Oct 20 2024, 01:51 AM IST

ಅತಿವೃಷ್ಟಿ-ಪ್ರವಾಹ ಸಂತ್ರಸ್ತರ ಸಮರ್ಪಕ ಸಮೀಕ್ಷೆ ನಡೆಸಿ: ಸಚಿವ ಸತೀಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಸಮರ್ಪಕ ಸಮೀಕ್ಷೆ ನಡೆಸುವಂತೆ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಸಮರ್ಪಕ ಸಮೀಕ್ಷೆ ನಡೆಸುವಂತೆ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.

ಪಟ್ಟಣದ ಹೊರವಲಯದ ಕ್ಯಾರಗುಡ್ಡ ಅವುಜೀಕರ ಆಶ್ರಮದ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹುಕ್ಕೇರಿ ತಾಲೂಕಿನಲ್ಲಿ ಪಾರದರ್ಶಕವಾಗಿ ಬೆಳೆಹಾನಿ ಸಮೀಕ್ಷೆ ನಡೆಸಬೇಕು ಎಂದು ಆದೇಶಿಸಿದರು.

ಈ ವಾರದಲ್ಲಿ ಸತತವಾಗಿ ಸುರಿದ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಬೆಳೆ ಮತ್ತು ಮನೆಗಳಿಗೆ ಹಾನಿಯಾಗಿರುವ ಮಾಹಿತಿಗಳಿವೆ. ಹಾಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕಂದಾಯ ಇಲಾಖೆ ಹಾಗೂ ತಾಂತ್ರಿಕ ಸಿಬ್ಬಂದಿ ಜಂಟಿ ಸಮೀಕ್ಷೆ ನಡೆಸಿ ಸಂತ್ರಸ್ತರ ನೈಜ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಬೇಕು. ಈ ಮೂಲಕ ಅತಿವೃಷ್ಟಿ ಮತ್ತು ಪ್ರವಾಹ ಸಂತ್ರಸ್ತರ ಪುನರ್ವಸತಿ ಯೋಜನೆ ಅರ್ಹರಿಗೆ ಲಭಿಸುವಂತೆ ನೋಡಿಕೊಳ್ಳಬೇಕು ಎಂದವರು ಸೂಚಿಸಿದರು.

ತಾಲೂಕಿನ ಬಹುತೇಕ ಕಡೆಗಳಲ್ಲಿ ಜಲಜೀವನ್‌ ಮಿಷನ್ (ಜೆಜೆಎಂ) ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳು ಅಪೂರ್ಣವಾಗಿದ್ದು, ಜೆಜೆಎಂ ಕಾಮಗಾರಿಗಳಿಗೆ ಕಳಪೆ ಸಾಮಗ್ರಿ ಬಳಸಲಾಗಿದೆ ಎಂಬ ದೂರುಗಳಿವೆ. ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಕೂಡಲೇ ಅಂಥ ಗುತ್ತಿಗೆದಾರರಿಗೆ ತಾಕೀತು ಮಾಡಿ ಗುಣಮಟ್ಟದ ಕಾಮಗಾರಿ ಮಾಡಿಸಬೇಕು ಎಂದು ಹೇಳಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಸಾರ್ವಜನಿಕರ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದವರಿಗೆ ಸೂಚಿಸಿದರು. ಇದೇ ವೇಳೆ ಪಶು ಸಂಗೋಪನಾ ಇಲಾಖೆಯ ಕಾಲು ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.

ಮಾಜಿ ಸಚಿವ ವೀರಕುಮಾರ ಪಾಟೀಲ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ತಹಸೀಲ್ದಾರ್‌ ಮಂಜುಳಾ ನಾಯಕ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪೂರಿ, ಆಶ್ರಮದ ಮಲ್ಲಯ್ಯಾ ಸ್ವಾಮೀಜಿ, ಆಪ್ತ ಸಹಾಯಕರಾದ ಪಾಂಡುರಂಗ ಮನ್ನಿಕೇರಿ, ಕಿರಣ ರಜಪೂತ, ಮುಖಂಡರಾದ ವಿಜಯ ರವದಿ, ಮಹಾಂತೇಶ ಮಗದುಮ್ಮ, ರಾಜು ಸಿದ್ನಾಳ, ಮೌನೇಶ ಪೋತದಾರ, ಬಸವೇಶ ಪಟ್ಟಣಶೆಟ್ಟಿ, ಸಂತೋಷ ಮುಡಸಿ, ಬಸವರಾಜ ಕೋಳಿ, ಶಾನೂಲ್ ತಹಶೀಲ್ದಾರ, ದಿಲೀಪ ಹೊಸಮನಿ, ರಮೇಶ ಹುಂಜಿ, ಕೆಂಪಣ್ಣ ಶಿರಹಟ್ಟಿ, ಕೆ.ವೆಂಕಟೇಶ, ಕಿರಣ ಬಾಗೇವಾಡಿ, ಪ್ರಕಾಶ ಮೈಲಾಖೆ, ಅಕ್ಷಯ ವೀರಮುಖ, ಭೀಮಗೌಡ ಅಮ್ಮಣಗಿ ಮತ್ತಿತರರು ಇದ್ದರು.