ಅಂಜುಮನ್ ಸಂಸ್ಥೆಯ ಚುನಾವಣೆ ನಡೆಸಲು ಒತ್ತಾಯ, ಗದಗದಲ್ಲಿ ಪ್ರತಿಭಟನೆ

| Published : Aug 08 2024, 01:36 AM IST

ಸಾರಾಂಶ

ಅಂಜುಮನ್‌ ಸಂಸ್ಥೆಗೆ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಗದಗ-ಬೆಟಗೇರಿ ಮುಸ್ಲಿಂ ಸಮುದಾಯ ನಿಯೋಜಿತ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಗದಗ: ಕಳೆದ 15 ವರ್ಷಗಳಿಂದ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಚುನಾವಣೆ ನಡೆಯದಿರುವುದರಿಂದ ಮುಸ್ಲಿಂ ಸಮುದಾಯದ ಪ್ರಗತಿ ನಿರೀಕ್ಷಿಸಿದ ರೀತಿಯಲ್ಲಿ ಆಗಿಲ್ಲ. ಆ ಹಿನ್ನೆಲೆಯಲ್ಲಿ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಗದಗ-ಬೆಟಗೇರಿ ಮುಸ್ಲಿಂ ಸಮುದಾಯ ನಿಯೋಜಿತ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಬಾಷಾಸಾಬ್ ಮಲಸಮುದ್ರ ಮಾತನಾಡಿ, ಕಳೆದ 15 ವರ್ಷಗಳಿಂದ ಅಂಜುಮನ್ ಏ ಇಸ್ಲಾಂ ಸಂಸ್ಥೆಗೆ ಚುನಾವಣೆಯೇ ನಡೆದಿಲ್ಲ. ಚುನಾವಣೆ ನಡೆಸುವಂತೆ ಒತ್ತಾಯಿಸಿದಾಗ ರಾಜ್ಯ ವಕ್ಫ್‌ ಬೋರ್ಡ್‌ ಆದೇಶ ಪಡೆದು 5 ವರ್ಷಗಳಿಗಾಗಿ ಅಡಾಕ್ ಕಮಿಟಿಯು ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯಾಗಿ 3 ವರ್ಷಗಳ ವರೆಗೆ ಕಾರ್ಯವನ್ನು ನಿರ್ವಹಿಸಲಿ ಎಂದು ರಚಿಸಲಾಯಿತು. ಜನವರಿ ತಿಂಗಳಲ್ಲಿ ಆ ಕಮಿಟಿಯ ಅವಧಿ ಮುಗಿದಿದ್ದು, ಈ ಆಡಳಿತ ಮಂಡಳಿ ಇನ್ನೂ ವರೆಗೂ ಫಾರಂ ನಂ. 42 ಹಾಗೂ ಅಗತ್ಯ ದಾಖಲೆಗಳನ್ನು ಗದಗ ಜಿಲ್ಲಾ ವಕ್ಫ್‌ ಬೋರ್ಡ್‌ಗೆ ನೀಡಿಲ್ಲ. ಅಲ್ಲದೇ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಅಧ್ಯಕ್ಷರು ಹಾಗೂ ಕೆಲವು ಪದಾಧಿಕಾರಿಗಳು ಕೈಯಲ್ಲಿ ಅಧಿಕಾರ ಇಲ್ಲದೇ ಸಮುದಾಯದ ಅಭಿವೃದ್ಧಿ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಮೂಲಕ ವಕ್ಫ್‌ ಬೋರ್ಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಖಂಡನೀಯ. ಅಂಜುಮನ್ ಏ ಇಸ್ಲಾಂ ಸಂಸ್ಥೆಗೆ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಈ ಚುನಾವಣೆ ಅನಿವಾರ್ಯ ಮತ್ತು ಅತ್ಯಗತ್ಯವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳ ಗೌರವ ಹೆಚ್ಚಿಸುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವಲ್ಲಿ ಜಿಲ್ಲಾ ವಕ್ಫ್‌ ಬೋರ್ಡ್‌ ಮುಂದಾಗಬೇಕಿದೆ. ಇನ್ನು 7 ದಿನಗಳ ಒಳಗೆ ಚುನಾವಣೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ವಕೀಲ ಮುಕ್ತಾರ ಮೌಲ್ವಿ ಮಾತನಾಡಿ, ಕಳೆದ 15 ವರ್ಷಗಳಿಂದ ಈ ಸಂಸ್ಥೆಗೆ ಚುನಾವಣೆ ನಡೆಯದಿರುವುದು ದುರದೃಷ್ಟಕರ ಸಂಗತಿ. ಚುನಾವಣೆ ವಿಳಂಬದ ಹಿಂದೆ ಕಾಣದ ಕೈಗಳ ಕೈವಾಡ ಇದೆ. ತಕ್ಷಣವೇ ಚುನಾವಣೆ ಘೋಷಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರೀಮಸಾಬ ಸುಣಗಾರ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದರೆ ಸಮುದಾಯದ ಬೆಳವಣಿಗೆಯೂ ಸಾಧ್ಯ. ಪ್ರಜಾಪ್ರಭುತ್ವ ಮೊಟಕುಗೊಳಿಸಿದರೆ ಸಮುದಾಯದ ಪ್ರಾಬಲ್ಯ ನಾವೇ ಕುಗ್ಗಿಸಿದಂತಾಗುತ್ತದೆ. ಮುಸ್ಲಿಂ ಸಮುದಾಯದ ಪ್ರಗತಿ ಹಾಗೂ ಪ್ರಾಬಲ್ಯಕ್ಕಾಗಿ ಎಲ್ಲರೂ ಒಟ್ಟಾಗಿರೋಣ. ಚುನಾವಣೆಯನ್ನು ಘೋಣೆ ಮಾಡಿದರೆ ಅವರ ಅವರ ಸಾಮರ್ಥ್ಯ ತಿಳಿಯಲಿದೆ. ತಕ್ಷಣವೇ ಚುನಾವಣೆ ಘೋಷಣೆಗೆ ಗದಗ ಜಿಲ್ಲಾ ವಕ್ಫ್‌ ಬೋರ್ಡ್‌ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

ಅಬ್ದುಲ್ ರಾಟಿ, ಹಾಜಿ ಅಲಿ ಕೊಪ್ಪಳ, ಶಿರಾಜ ಕದಡಿ, ಚಾಂದಸಾಬ್‌ ಕೊಟ್ಟೂರ, ಅಬ್ದುಲ ರಜಾಕ್ ಶಿರಹಟ್ಟಿ, ರಿಯಾಜ್ ಡಾಲಾಯತ್, ಯುಸೂಫ್‌ ಡಂಬಳ, ತನ್ವೀರ್ ರೋಣ, ಮುಜಾಫರ ಮುಲ್ಲಾ, ಮುಸ್ತಕೀಮ ಶಿರಹಟ್ಟಿ, ಜವುಳ ಕರೀಮ, ದಾದಾಪೀರ ಕೊಟ್ಟೂರ, ಮೌಲಾಸಾಬ ಗಚ್ಚಿ, ಮೆಹಬೂಬ ಸಾಬ ಮುಲ್ಲಾ, ಮಲಿಕಸಾಬ ಭಾವಿಕಟ್ಟಿ, ದಾದಾಸಾಬ, ತೌಸಿಪ್ ನರಗುಂದ ಇದ್ದರು.