ಪ್ರಾಮಾಣಿಕವಾಗಿ ಚುನಾವಣೆ ಕಾರ್ಯ ನಿರ್ವಹಿಸಿ

| Published : May 01 2024, 01:17 AM IST

ಸಾರಾಂಶ

ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ಪ್ರಕ್ರಿಯೆ ನಡೆಯಲು ಎಲ್ಲ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲಗಳಿಗೆ ಈಡಾಗದಂತೆ ಮತದಾನ ಪ್ರಕ್ರಿಯೆ ನಡೆಯುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ.ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ಪ್ರಕ್ರಿಯೆ ನಡೆಯಲು ಎಲ್ಲ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲಗಳಿಗೆ ಈಡಾಗದಂತೆ ಮತದಾನ ಪ್ರಕ್ರಿಯೆ ನಡೆಯುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ.ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೋಣೆಗಳಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ನಿಯುಕ್ತಿಗೊಂಡ ಚುನಾವಣೆ ಸಿಬ್ಬಂದಿಗಳಿಗೆ ಮಂಗಳವಾರ ಎರಡನೇ ಹಂತದ ತರಬೇತಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಪ್ರತಿ ಕೊಠಡಿಗಳಿಗೂ ಭೇಟಿ ಪರಿಶೀಲಿಸಿ ಅವರು ಮಾತನಾಡಿದರು.

ಯಾವುದೇ ಕಾರಣಕ್ಕೂ ಮರುಮತದಾನವಾಗದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಮತದಾನ ಕೇಂದ್ರದೊಳಗೆ ಮೊಬೈಲ್‌ಗೆ ಅವಕಾಶ ನೀಡದಂತೆ ಅಧಿಕಾರಿಗಳು ಗಮನಹರಿಸಬೇಕು. ಈ ತರಬೇತಿಯಲ್ಲಿ ಸಿಬ್ಬಂದಿಗಳಿಗೆ ಯಾವುದೇ ಸಂದೇಹಗಳು ಇದ್ದರೆ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡು ಚುನಾವಣೆ ಪ್ರಕ್ರಿಯೆ ನಿರಾಂತಕವಾಗಿ ಮುಗಿಯಲು ಸಿಬ್ಬಂದಿಗಳು ತಮ್ಮ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

೧೧೨೦ ಸಿಬ್ಬಂದಿ ಭಾಗಿ:

ಬೆಳಗ್ಗೆ ವಿವಿಧ ಮತಕ್ಷೇತ್ರಗಳಿಂದ ನಿಯುಕ್ತಿಗೊಂಡ ಚುನಾವಣೆಯ ಸಿಬ್ಬಂದಿಗಳು ಬರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಮತಕ್ಷೇತ್ರಗಳಿಗೆ ನಿಯುಕ್ತಿಗೊಂಡ ಬಸವನಬಾಗೇವಾಡಿ ಮತಕ್ಷೇತ್ರದ ಸಿಬ್ಬಂದಿಗಳಿಗೂ ಬಸ್ ವ್ಯವಸ್ಥೆ ಮಾಡಲಾಗಿತ್ತು. ತರಬೇತಿಯು ೧೭ ಕೋಣೆಗಳಲ್ಲಿ ಆಯೋಜನೆ ಮಾಡಲಾಗಿತ್ತು. ತರಬೇತಿಯಲ್ಲಿ ೧೧೨೦ ಸಿಬ್ಬಂದಿಗಳು ಭಾಗವಹಿಸಿದ್ದರು. ತರಬೇತಿಯಲ್ಲಿ ಪಿಆರ್‌ಓ, ಎಪಿಆರ್‌ಓ, ಪಿಒಗಳಿಗೆ ಪ್ರೊಜೆಕ್ಟರ್ ಮೂಲಕ ಲೋಕಸಭಾ ಚುನಾವಣೆಯ ಮತದಾನ ನಡೆಯುವ ಮುನ್ನಾ ದಿನ ಕೈಗೊಳ್ಳುವ ಸಿದ್ಧತೆ, ಮತದಾನ ನಡೆಯುವ ದಿನ ಕೈಗೊಳ್ಳುವ ಸಿದ್ಧತೆ, ಅಣಕು ಮತದಾನ, ಚುನಾವಣೆ ಆಯೋಗ ನೀಡಿದ ಮಾರ್ಗದರ್ಶಿ ಸೂಚನೆಗಳನ್ನು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಸಮಗ್ರ ಸೈದ್ದಾಂತಿಕ ಮಾಹಿತಿ, ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮಾಸ್ಟರ್ ಟ್ರೇನರ್, ಸೆಕ್ಟರ್ ಅಧಿಕಾರಿಗಳು ಪ್ರಾಯೋಗಿಕ ತರಬೇತಿ ನೀಡಿದರು.

ಸಂದೇಹ ಪರಿಹರಿಸಿಕೊಂಡ ಸಿಬ್ಬಂದಿ:

ತರಬೇತಿಯಲ್ಲಿ ಸಿಬ್ಬಂದಿಗಳು ತಮಗೆ ಉಂಟಾಗುವ ಗೊಂದಲಗಳನ್ನು ಮಾಸ್ಟರ್ ಟ್ರೇನರ್‌ಗಳಿಂದ ಕೇಳಿ ಪರಿಹರಿಸಿಕೊಂಡರು. ಸಖೀ ಮತಗಟ್ಟೆ ಕೇಂದ್ರ ಹಾಗೂ ವಿಶೇಷ ಚೇತನ ಮತಗಟ್ಟೆ ಕೇಂದ್ರಗಳಿಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಪ್ರತ್ಯೇಕ ತರಬೇತಿ ಕೋಣೆಯಲ್ಲಿ ತರಬೇತಿ ಆಯೋಜನೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ್‌ ಎಸ್.ಎಸ್.ನಾಯಕಲಮಠ, ನಿಡಗುಂದಿ ತಹಸೀಲ್ದಾರ್‌ ನೀಲಪ್ರಭಾ, ಚುನಾವಣಾ ಶಿರಸ್ತೇದಾರ ಮಹೇಶ ಬಳಗಾನೂರ, ಕೆ.ಜಿ.ಪತ್ತಾರ, ಕೆ.ಎಂ.ಗುಡೂರ, ಬಿ.ಆರ್.ಪೋಲೇಶಿ, ಎಂ.ಎಸ್.ಜಹಾಗೀರದಾರ, ಎನ್.ಕೆ. ನದಾಫ, ಚುನಾವಣಾ ವಿಷಯ ನಿರ್ವಾಹಕ ಎಚ್.ಸಿ.ಇಂಗಳೆ, ಕಂಪ್ಯೂಟರ್ ಆಪರೇಟರ್ ಅನಿಲ ಅವಟಿ, ಕಂದಾಯ ಇಲಾಖೆಯ ಉಪತಹಸೀಲ್ದಾರರು, ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ಗ್ರಾಮಾಡಳಿತಾಧಿಕಾರಿಗಳು, ಗ್ರಾಮಸಹಾಯಕರು ಇತರರು ಇದ್ದರು. ಜಿಲ್ಲಾ ತರಬೇತಿ ನೋಡಲ್ ಅಧಿಕಾರಿ ರಾಜಶೇಖರ ಡಂಬಳ ಅವರು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು.