ಅಕ್ರಮ ರೆಸಾರ್ಟ್‌ ಸರ್ವೇ ನಡೆಸಿ ಡೀಸಿ ಸೂಚನೆ

| Published : Jun 29 2024, 12:36 AM IST

ಸಾರಾಂಶ

ಸಾರ್ವಜನಿಕ ರಸ್ತೆ ಒತ್ತುವರಿ ತಿಂಗಳೊಳಗೆ ತೆರವುಗೊಳಿಸಬೇಕು, ಪೌತಿ ಖಾತೆ ವಿಳಂಬ ಮಾಡದೆ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಸಾರ್ವಜನಿಕ ರಸ್ತೆ ಒತ್ತುವರಿ ತಿಂಗಳೊಳಗೆ ತೆರವುಗೊಳಿಸಬೇಕು, ಪೌತಿ ಖಾತೆ ವಿಳಂಬ ಮಾಡದೆ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದರು.

ತಾಲೂಕಿನ ಹಂಗಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅಧ್ಯಕ್ಷತೆಯಲ್ಲಿ ನಡೆದ ಹಂಗಳ ಹೋಬಳಿ ಮಟ್ಟದ ಜನಸ್ಪಂದನಾ ಸಭೆಯಲ್ಲಿ ಕೇಳಿ ಬಂದ ದೂರುಗಳನ್ನು ಆಲಿಸಿ ಬಳಿಕ ಮಾತನಾಡಿದರು. ಸಾರ್ವಜನಿಕ ರಸ್ತೆ, ಬಂಡಿದಾರಿ ಒತ್ತುವರಿಯಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ, ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಿ ವರದಿ ನೀಡಬೇಕು ಎಂದು ಆದೇಶಿಸಿದರು.

ಅರಣ್ಯ ಒತ್ತುವರಿ ಹಾಗೂ ಅಕ್ರಮ ರೆಸಾರ್ಟ್‌ಗಳ ಬಗ್ಗೆ ದೂರುಗಳು ಕೇಳಿ ಬಂದಿವೆ, ಉಪ ವಿಭಾಗಾಧಿಕಾರಿಗಳು ಸ್ಥಳ ಭೇಟಿ ಮಾಡಿ ಪರಿಶೀಲಿಸಬೇಕು. ಅಕ್ರಮ ಕಂಡು ಬಂದಲ್ಲಿ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದರು. ಕಾಡಂಚಿನ ಗ್ರಾಮದಲ್ಲಿ ರೈತರ ಜಮೀನುಗಳ ಮೇಲೆ ಕಾಡು ಪ್ರಾಣಿಗಳ ಹಾವಳಿ/ದಾಳಿ ಹೆಚ್ಚಿವೆ. ಬೆಳೆ ನಾಶದ ಪರಿಹಾರ ಮಂದಗತಿಯಲ್ಲಿ ಕೊಡುತ್ತಾರೆ. ಆನೆ ಕಂದಕ ಹಾಗೂ ಗಿರಿಜನರ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಎಸಿ ಮಹೇಶ್, ತಹಸೀಲ್ದಾರ್ ಟಿ.ರಮೇಶ್ ಬಾಬು, ತಾಪಂ ಇಒ ರಾಮಲಿಂಗಯ್ಯ, ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್. ನವೀನ್ ಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಹಂಗಳ ಹೋಬಳಿಯ ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.ಜನಸಂಪರ್ಕ ಸಭೇಲಿ ಸಮಸ್ಯೆಗಳ ಹೂರಣ!

ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅಧ್ಯಕ್ಷತೆಯಲ್ಲಿ ಹಂಗಳ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಕಾಡು ಪ್ರಾಣಿಗಳ ನಿರಂತರ ಹಾವಳಿ, ಅರಣ್ಯ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್‌, ಹೋಂ ಸ್ಟೇ, ರಸ್ತೆ, ಬಂಡಿದಾರಿ ಸಂಬಂಧ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದವು. ಹಂಗಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು, ಸಿಬ್ಬಂದಿಗಳ ಕೊರತೆ, ಕುಡಿವ ನೀರಿನ ಸಮಸ್ಯೆ ಇದೆ. ಎಲಚಟ್ಟಿ, ಬಾಚಹಳ್ಳಿ, ಮಂಗಲಗಳ ರಸ್ತೆ ಹದಗೆಟ್ಟಿದ್ದು ದುರಸ್ಥಿ ಪಡಿಸಬೇಕು. ಪೌತಿಖಾತೆ, ಜಮೀನಿನ ರಸ್ತೆ ಸಮಸ್ಯೆ, ಸಾಗುವಳಿ, ಗ್ರಾಪಂನಲ್ಲಿ ಕೆಲಸ ವಿಳಂಬ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ದೂರುಗಳು ಸಲ್ಲಿಕೆ ಆಗಿವೆ.

ಜನ ಸ್ಪಂದನ ಸಭೆಯಲ್ಲಿ ಕೇಳಿ ಬಂದ ದೂರುಗಳನ್ನು ಆಲಿಸಿದ್ದೇನೆ. ಸ್ಥಳದಲ್ಲೇ ಇತ್ಯರ್ಥವಾದ ದೂರಿನ ಸಮಸ್ಯೆ ಬಗೆಹರಿಸಲಾಗಿದೆ. ಉಳಿದಂತ ಸಮಸ್ಯೆಗಳಿಗೆ ಸಮಯ ಅವಕಾಶ ನೀಡಿದ್ದು, ಅಷ್ಟರೊಳಗೆ ಸಮಸ್ಯೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು.

-ಶಿಲ್ಪಾನಾಗ್‌, ಜಿಲ್ಲಾಧಿಕಾರಿ,