ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ -೧೫೦ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಜಿಲ್ಲೆಯಲ್ಲಿ ಡಿ.೭ರಂದು ಮಧ್ಯಾಹ್ನ ೨ರಿಂದ ೪ ಗಂಟೆಯವರೆಗೆ ಜಿಲ್ಲೆಯ ಒಟ್ಟು ೧೪ ಪರೀಕ್ಷಾ ಕೇಂದ್ರದಲ್ಲಿ ೭,೪೦೫ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ ಎದುರಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಡಿ.೭,೮ರಂದು ನಡೆಯುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ನೇಮಕಾತಿ ಪರೀಕ್ಷೆಯನ್ನು ಪಾರದರ್ಶಕ ಮತ್ತು ವ್ಯವಸ್ಥಿತವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ೧೫೦ ಪಿಡಿಒ ಹುದ್ದೆಗಳ ನೇಮಕಾತಿಗಾಗಿ ಮಂಡ್ಯ ಮತ್ತು ಮದ್ದೂರು ಉಪಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ -೧೫೦ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಜಿಲ್ಲೆಯಲ್ಲಿ ಡಿ.೭ರಂದು ಮಧ್ಯಾಹ್ನ ೨ರಿಂದ ೪ ಗಂಟೆಯವರೆಗೆ ಜಿಲ್ಲೆಯ ಒಟ್ಟು ೧೪ ಪರೀಕ್ಷಾ ಕೇಂದ್ರದಲ್ಲಿ ೭,೪೦೫ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ ಎದುರಿಸಲಿದ್ದಾರೆ.ಡಿ.೮ರಂದು ಬೆಳಗ್ಗೆ ೧೦ರಿಂದ ೧೧.೩೦ ಗಂಟೆಯವರೆಗೆ ಪತ್ರಿಕೆ -೧(ಸಾಮಾನ್ಯ ಜ್ಞಾನ) ಹಾಗೂ ಮಧ್ಯಾಹ್ನ ೨ ರಿಂದ ೪ ಗಂಟೆಯವರೆಗೆ ಪತ್ರಿಕೆ- ೨(ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ)ನ್ನು ಮಂಡ್ಯದಲ್ಲಿ ಒಟ್ಟು ೨೦ ಪರೀಕ್ಷಾ ಕೇಂದ್ರದಲ್ಲಿ ೧೦,೫೫೭ ಅಭ್ಯರ್ಥಿಗಳು ಹಾಗೂ ಮದ್ದೂರಿನಲ್ಲಿ ೬ ಪರೀಕ್ಷಾ ಕೇಂದ್ರದಲ್ಲಿ ೧,೯೨೦ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಮಂಡ್ಯ ಹಾಗೂ ಮದ್ದೂರು ಸೇರಿದಂತೆ ೨೬ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೧೨,೪೭೭ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ವಿವರಿಸಿದರು.
ವಿಶೇಷವಾಗಿ ಮಂಡ್ಯ ವಿಶ್ವ ವಿದ್ಯಾನಿಲಯದಲ್ಲಿ ದಿವ್ಯಾಂಗ ಚೇತನರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕಲ್ಲುಕಟ್ಟಡ ಹಾಗೂ ಪಿಇಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ತೃತೀಯ ಲಿಂಗಿ (ಟ್ರಾನ್ಸ್‌ಜೆಂಡರ್) ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.ಲೋಕಸೇವಾ ಆಯೋಗದಿಂದ ಪರೀಕ್ಷಾ ಕೇಂದ್ರಗಳಿಗೆ ಜಾಮರ್, ಸಿಸಿಟಿವಿ ಅಳವಡಿಕೆ, Face recognition ಮತ್ತು Frisking ಕಾರ್ಯನಿರ್ವಹಣೆಯ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಮೇಲ್ವಿಚಾರಕರು ಎಚ್ಚರವಹಿಸಿ ಪರೀಕ್ಷಾ ನಿಯಮಗಳನ್ನು ಪಾಲಿಸಬೇಕು. ಪರೀಕ್ಷೆಯಲ್ಲಿ ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದಂತೆ ನಿಮ್ಮ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಮಂಡ್ಯ ಬಿ.ಇ.ಒ ಮಹದೇವ, ಮದ್ದೂರು ಬಿಇಒ ಕಾಳಿರಯ್ಯ, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕಿ ಡಾ. ರೋಹಿಣಿ ಸೇರಿದಂತೆ ವಿವಿಧ ಕಾಲೇಜಿನ ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.