ಸಾರಾಂಶ
ಇಂದು ತಾಂತ್ರಿಕ ಮತ್ತು ಆಧುನಿಕ ಜಗತ್ತಾಗಿರುವ ಕಾರಣ ವಿಜ್ಞಾನ, ಸಂಶೋಧನೆಯತ್ತ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ತಿಳಿಸಿದರು.
ತಿಪಟೂರು: ಇಂದು ತಾಂತ್ರಿಕ ಮತ್ತು ಆಧುನಿಕ ಜಗತ್ತಾಗಿರುವ ಕಾರಣ ವಿಜ್ಞಾನ, ಸಂಶೋಧನೆಯತ್ತ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ತಿಳಿಸಿದರು.ನಗರದ ಎಸ್‌ವಿಪಿ ಸಂಯಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, ವಿಚಾರಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನ ವಿಷಯ ಕಷ್ಟಕರವೆಂಬ ಭಯ ಬಿಟ್ಟು ಸತತವಾಗಿ ಅಭ್ಯಾಸ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿರುವ ಮೌಢ್ಯ, ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ವಿಚಾರವಂತಿಕೆಯನ್ನು ಮೈಗೂಡಿಸಿಕೊಂಡು ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳುವ ಜೊತೆಗೆ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ಮುಂದಾಗಬೇಕು ಎಂದರು. ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಮಾತನಾಡಿ, ವಿಜ್ಞಾನವು ತರ್ಕ ಮತ್ತು ಪ್ರಯೋಗಗಳ ಮೂಲಕ ಸತ್ಯಾನ್ವೇಷಣೆಯನ್ನು ಮಾಡುತ್ತದೆ. ಪೂರ್ವಿಕರ ಪರಂಪರೆ, ಮೌಢ್ಯ ಸಂಪ್ರದಾಯ ಆಚಾರಗಳ ಹಿಂದೆ ಅಡಗಿರುವ ವಿಚಾರಗಳನ್ನು ತಿಳಿಸುತ್ತಾ ವೈಚಾರಿಕತೆಯ ಮನೋಭಾವನೆ ಬೆಳೆಸುತ್ತದೆ. ಪ್ರಯೋಗಶೀಲ ಪ್ರವೃತ್ತಿ, ಸಂಶೋಧನೆ, ಅನ್ವೇಷಣೆ, ಆವಿಷ್ಕಾರ, ಪ್ರಶ್ನೆ ಮಾಡುವ ಪ್ರಜ್ಞೆಯನ್ನು ಸಂವರ್ಧಿಸುತ್ತದೆ. ಶಿಕ್ಷಕರಾದವರು ಸರ್.ಎಂ. ವಿಶ್ವೇಶ್ವರಯ್ಯ, ಅಬ್ದುಲ್‌ಕಲಾಂ, ಡಾ.ಎಚ್. ನರಸಿಂಹಯ್ಯರಂತಹ ಮೊದಲಾದ ವಿಜ್ಞಾನಿಗಳ ಪ್ರಯೋಗದ ಮಾದರಿಗಳನ್ನ ತಯಾರಿಸಿ ವಿಜ್ಞಾನದ ಕುತೂಹಲವನ್ನು ಕೆರಳಿಸುವಂತೆ ಮಾಡಬೇಕು ಎಂದರು.ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಮೇಶ್‌ಗೌಡ, ಮಂಜುನಾಥ್, ಶ್ಯಾಮಸುಂದರ್, ಸ.ಚ. ಜಗದೀಶ್, ದಕ್ಷಿಣಮೂರ್ತಿ, ಸಿದ್ದೇಶ್, ಸಂತೋಷ್, ದೇವರಾಜು, ವೀರೇಶ್, ಜುಂಜಯ್ಯ, ವಿಜಯಕುಮಾರ್, ವಿಜಯಕುಮಾರಿ ಇದ್ದರು.