ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ‘ಭೂ ಮಾಪಕರ’ ಹುದ್ದೆಗಳ ನೇರ ನೇಮಕಾತಿ ಹಾಗೂ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ.
ಮಡಿಕೇರಿ; ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿನ ಉಳಿಕೆ ಮೂಲ ವೃಂದದ ‘ಭೂ ಮಾಪಕರ’ ಹುದ್ದೆಗಳ ನೇರ ನೇಮಕಾತಿ ಹಾಗೂ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದದ ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಯನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರೀಕ್ಷೆ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪ ಉಂಟಾಗದಂತೆ ಎಚ್ಚರವಹಿಸುವಂತೆ ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈಗಾಗಲೇ ಪರೀಕ್ಷೆ ಸಂಬಂಧ ವೀಕ್ಷಕರು ಹಾಗೂ ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಎಲ್ಲಾ ಹಂತದ ಅಧಿಕಾರಿಗಳು ಒಂದು ತಂಡವಾಗಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಅವರು ತಾಕೀತು ಮಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎ.ಗಣಪತಿ ಅವರು ಮಾಹಿತಿ ನೀಡಿ ‘ಭೂಮಾಪಕರ’ ಹುದ್ದೆಯ ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯು ಅ. 2 ರಂದು ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, 386 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು. ಹಾಗೆಯೇ ಅ. 4 ರಂದು ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗಳ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯು ನಗರದ 5 ಕೇಂದ್ರಗಳಲ್ಲಿ ನಡೆಯಲಿದ್ದು, 2,344 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ವಿವರಿಸಿದರು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಸರ್ಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ, ಸಂತ ಜೋಸೆಫರ ಕಾನ್ವೆಂಟ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಕೊಡಗು ವಿದ್ಯಾಲಯ ಮಡಿಕೇರಿ ಈ 5 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಗಣಪತಿ ಅವರು ಮಾಹಿತಿ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ಅಗತ್ಯ ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಿರಂಜನ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ರಘು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ, ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಸೋಮಶೇಖರ್, ಸಮಗ್ರ ಗಿರಿಜನ ಯೋಜನಾ ಇಲಾಖೆಯ ಉಪ ನಿರ್ದೇಶಕರಾದ ಭಾಗೀರಥಿ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಸಚಿನ್, ತಹಸೀಲ್ದಾರರಾದ ಶ್ರೀಧರ, ಪ್ರವೀಣ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ.ನಾಗರಾಜು, ಶಿಕ್ಷಣ ಸಂಯೋಜಕರಾದ ಜಾನೆಟ್, ಡಿಡಿಪಿಐ ಕಚೇರಿಯ ಉಪ ಯೋಜನಾ ಸಮನ್ವಯಾಧಿಕಾರಿ ಕೃಷ್ಣಪ್ಪ, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜಯ್ ಇತರರು ಇದ್ದರು.ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ: ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲು ಭಾರತೀಯ ನಾಗರಿಕ ಸಂಹಿತೆ 2023ರ ಕಲಂ 163 ರಡಿ ಪ್ರದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ.ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಸ್ಥಳ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಘೋಷಿಸಿ ಆದೇಶಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿ ಮತ್ತು ಸೈಬರ್ ಸೆಂಟರ್‍ಗಳು ಪರೀಕ್ಷಾ ದಿನಗಳಂದು ಮುಚ್ಚಲು ತಿಳಿಸಿದ್ದಾರೆ. ಈ ಆದೇಶವು ಪರೀಕ್ಷಾ ದಿನದಂದು ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.