ಯಾವುದೇ ಲೋಪವಾಗದಂತೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ

| Published : Oct 26 2023, 01:00 AM IST

ಯಾವುದೇ ಲೋಪವಾಗದಂತೆ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಇಲಾಖೆಗಳಲ್ಲಿ ಖಾಲಿರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆ(ಎಸ್‌ಡಿಎ)ಗಳ ನೇಮಕಾತಿಗಾಗಿ ಅ.೨೯ರಂದು ಜಿಲ್ಲೆಯ ೪೬ ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಯಾವುದೇ ಲೋಪವಾಗದಂತೆ, ಸುವ್ಯವಸ್ಥೆವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ

ಅ.೨೯ರಂದು ಎಸ್‌ಡಿಎ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ । ಜಿಲ್ಲೆಯಲ್ಲಿ ೪೬ ಪರೀಕ್ಷಾ ಕೇಂದ್ರ

ಕನ್ನಡಪ್ರಭ ವಾರ್ತೆ ಹಾವೇರಿ

ವಿವಿಧ ಇಲಾಖೆಗಳಲ್ಲಿ ಖಾಲಿರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆ(ಎಸ್‌ಡಿಎ)ಗಳ ನೇಮಕಾತಿಗಾಗಿ ಅ.೨೯ರಂದು ಜಿಲ್ಲೆಯ ೪೬ ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಯಾವುದೇ ಲೋಪವಾಗದಂತೆ, ಸುವ್ಯವಸ್ಥೆವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ದ್ವಿತೀಯ ದರ್ಜೆ ಸಹಾಯಕ ಹುದ್ದೆ(ಎಸ್‌ಡಿಎ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಅ.೨೯ರಂದು ಬೆಳಗ್ಗೆ ೧೦.೩೦ ರಿಂದ ೧.೩೦ ಹಾಗೂ ಮಧ್ಯಾಹ್ನ ೨.೩೦ ರಿಂದ ಸಂಜೆ ೪.೩೦ರವರೆಗೆ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಶಿಕ್ಷಕರು ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಎಲೆಕ್ಟ್ರಾನಿಕ್ ಉಪಕರಣಗಳ ನಿಷೇಧ:

ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳಾದ ಮೊಬೈಲ್, ಬ್ಲೂಟೂತ್, ಪೇಜರ್, ವೈರಲೆಸ್ ಸೆಟ್, ಲಾಗ್ ಲೇಬಲ್, ಕ್ಯಾಲಕ್ಯುಲೇಟರ್ ಹಾಗೂ ರಿಸ್ಟ್ ವಾಚ್‌ಗಳನ್ನು ಪರೀಕ್ಷಾರ್ಥಿಗಳು ಹಾಗೂ ಕೊಠಡಿ ಮೇಲ್ವಿಚಾರಕರು ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

೨೦೦ ಮೀಟರ್ ಪ್ರದೇಶ ನಿಷೇಧ:

೪೬ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ, ಝರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಿಸಲು ಆದೇಶಿಸಲಾಗುವುದು ಎಂದರು.

ತ್ರಿ ಸದಸ್ಯ ಸಮಿತಿ ಪರೀಕ್ಷೆ ಮುನ್ನಾದಿನ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಈವರೆಗೆ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಸುಗಮವಾಗಿ ಜರುಗಿದ್ದು, ಮುಂದೆಯೂ ಸಹ ಪರೀಕ್ಷೆಗಳನ್ನು ಅತ್ಯಂತ ಜಾಗರೂಕತೆಯಿಂದ ಜವಾಬ್ದಾರಿಯಿಂದ ನಡೆಸುವ ಮೂಲಕ ಜಿಲ್ಲೆಗೆ ಕಪ್ಪು ಚುಕ್ಕೆ ಬರದಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಾತನಾಡಿ, ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿ ಮಕ್ಕಳು ಅಥವಾ ಸಂಬಂಧಿಕರು ಪರೀಕ್ಷೆ ಬರೆಯುತ್ತಿರಬಾರದು. ಈ ಬಗ್ಗೆ ಪರಿಶೀಲಿಸಿ. ಪರೀಕ್ಷೆಗೆ ನಿಯೋಜಿತ ಮೇಲ್ವಿಚಾರಕರು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಲಾಟರಿ ಮೂಲಕ ಕೊಠಡಿ ಮೇಲ್ವಿಚಾರಕರ ನೇಮಕ ಮಾಡಬೇಕು. ಪ್ರಶ್ನೆ ಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆ ಬಂಡಲ್ ಮಾಡುವಾಗ ಸಿಸಿ ಟಿವಿ ವೀಕ್ಷಣಾ ಅಡಿಯಲ್ಲೇ ಕೈಗೊಳ್ಳುವಂತೆ ಸೂಚನೆ ನೀಡಿದರು.

ಆಭರಣ ನಿಷೇಧ:

ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಉದ್ದ ತೋಳಿನ ಉಡುಪು, ಜೀನ್ಸ್, ಮಾಸ್ಕ್, ಶೂ ಧರಿಸಿ ಬರುವಂತಿಲ್ಲ. ಮಂಗಳಸೂತ್ರ ಮತ್ತು ಮೂಗುತಿ ಹೊರತುಪಡಿಸಿ ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ. ಈ ಸೂಚನೆಗಳನ್ನು ಪರೀಕ್ಷಾ ಪ್ರವೇಶ ಪತ್ರಗಳಲ್ಲಿ ನೀಡಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳ ತಪಾಸಣಾ ಕಾರ್ಯಕ್ಕೆ ಓರ್ವ ಮಹಿಳಾ ಹಾಗೂ ಓರ್ವ ಪುರುಷ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯಿಂದ ಆರೋಗ್ಯ ಸಹಾಯಕರನ್ನು ನೇಮಕ ಮಾಡಬೇಕು. ಬಿಗಿ ಪೊಲೀಸ್ ಬಂದೋಬ್ತಸ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಿಸಿ ಟಿವಿ ಕಡ್ಡಾಯ:ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಟಿವಿ ಅಳವಡಿಕೆ ಹಾಗೂ ಗಡಿಯಾರ ಕಡ್ಡಾಯವಾಗಿದೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು. ಪ್ರತಿ ಪರೀಕ್ಷಾ ಕೇಂದ್ರದ ಸಿಸಿ ಟಿವಿಗಳ ಕಾರ್ಯನಿರ್ವಹಣೆ ಕುರಿತಂತೆ ಮುಂಚಿತವಾಗಿ ಪರಿಶೀಲಿಸಿ. ಪರೀಕ್ಷೆ ನಡೆಯುವ ದಿನ ಸಿಸಿ ಟಿವಿಗಳ ಯಾವುದೇ ತಾಂತ್ರಿಕ ತೊಂದರೆಯಾಗದಂತೆ ನಿಗಾ ವಹಿಸಬೇಕು. ವಿದ್ಯುತ್ ವ್ಯತ್ಯಯವಾಗದಂತೆ ಹೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು. ಈ ಕುರಿತು ತಹಸೀಲ್ದಾರಗಳು ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಾರ್ಗಾಧಿಕಾರಿಗಳು, ವೀಕ್ಷಕರು, ಸ್ಕ್ವಾಡ್‌ಗಳು, ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್. ಉಮೇಶಪ್ಪ ಪರೀಕ್ಷಾ ಸಿದ್ಧತೆ ಹಾಗೂ ಮಾರ್ಗಸೂಚಿಗಳ ಕುರಿತಂತೆ ಮಾಹಿತಿ ನೀಡಿ, ಪರೀಕ್ಷಾ ಗೌಪ್ಯತೆ ಹಾಗೂ ಪಾರದರ್ಶಕತೆಯನ್ನು ಎಲ್ಲ ಪರೀಕ್ಷಾ ಮೇಲ್ವಿಚಾರಕರು ಕಾಪಾಡಿಕೊಳ್ಳಬೇಕು. ಖಜಾನೆಯಿಂದ ಪ್ರಶ್ನೆಪತ್ರಿಕೆ ಕೊಂಡೊಯ್ಯಲು ತ್ರಿಸದಸ್ಯರ ಸಮಿತಿ ರಚಿಸಲಾಗಿದೆ. ಇವರ ಉಸ್ತುವಾರಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಪೊಲೀಸ್ ಬೆಂಗಾವಲಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗುವುದು. ಸುಗಮವಾಗಿ ಪರೀಕ್ಷೆ ನಡೆಸಲು ಪ್ರೌಢಶಾಲೆ ಮತ್ತು ಪದವಿ ಕಾಲೇಜುಗಳ ಕೊಠಡಿಗಳನ್ನು ಹಾಗೂ ಶಿಕ್ಷಕರನ್ನು ಅವಶ್ಯಕ್ಕೆ ತಕ್ಕಂತೆ ನಿಯೋಜಿಸಬೇಕು. ಜಿಲ್ಲಾ ಖಜಾನೆಯಲ್ಲಿ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸುವ ಮಾರ್ಗಾಧಿಕಾರಿ ಬಯೋಮೆಟ್ರಿಕ್ ಮಾಡಿಸಬೇಕು ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳು:

ಸವಣೂರಿನಲ್ಲಿ ಮೂರು, ಹಾನಗಲ್ ಹಾಗೂ ಹಿರೇಕೆರೂರಿನಲ್ಲಿ ತಲಾ ನಾಲ್ಕು, ಬ್ಯಾಡಗಿ ಹಾಗೂ ಶಿಗ್ಗಾಂವಿಯಲ್ಲಿ ತಲಾ ಐದು, ರಾಣಿಬೆನ್ನೂರಿನಲ್ಲಿ ಏಳು, ಹಾವೇರಿಯಲ್ಲಿ ೧೮ ಒಳಗೊಂಡಂತೆ ೪೬ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಬೆಳಗಿನ ಅವಧಿಗೆ ೧೬,೧೬೫ ಹಾಗೂ ಮಧ್ಯಾಹ್ನ ಅವಧಿಗೆ ೧೬,೧೧೬ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಉಮೇಶಪ್ಪ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಡಿಪಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಾಚಾರ್ಯರು ಉಪಸ್ಥಿತರಿದ್ದರು.