ಹೊಸಪೇಟೆ: ದ್ವಿತೀಯ ಹಂತದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಯಾವುದೇ ಅಕ್ರಮಗಳಿಗೆ ಎಡೆಮಾಡಿಕೊಡದೇ ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದ್ವಿತೀಯ ಹಂತದ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದ್ವಿತೀಯ ಹಂತದ ಪರೀಕ್ಷೆಯು ಇದೇ ಮೇ 18ರಿಂದ 25ರವರೆಗೆ ನಡೆಯಲಿದೆ. ಜಿಲ್ಲೆಯ 5 ತಾಲೂಕುಗಳಿಂದ 2,266 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ದ್ವಿತೀಯ ಹಂತದ ಪರೀಕ್ಷೆಗಾಗಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ 3, ಹಗರಿಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕಿನಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರ ಸೇರಿ ಒಟ್ಟು 7 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದ ಸುತ್ತ ಸೂಕ್ತ ಭದ್ರತೆ ಕಲ್ಪಿಸಬೇಕು. ಪರೀಕ್ಷಾ ಅಕ್ರಮಗಳಿಗೆ ಆಸ್ಪದ ನೀಡದಂತೆ ಪ್ರತಿ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಬೇಕು. ಪರೀಕ್ಷೆ ನಡೆಯುವ ಸಮಯದಲ್ಲಿ ಕೇಂದ್ರದ ಸುತ್ತಮುತ್ತಲಿನ ಎಲ್ಲ ಜೆರಾಕ್ಸ್, ಸೈಬರ್ ಕೇಂದ್ರ ಕಡ್ಡಾಯವಾಗಿ ಮುಚ್ಚಬೇಕು. ನಿಯಮ ಮೀರುವವರ ವಿರುದ್ಧ ಕಠಿಣ ಕಾನೂನು ಕ್ರಮ ನಡೆಸುವ ಎಚ್ಚರಿಕೆ ನೀಡಲಾಗಿದೆ.ಪ್ರತಿ ಪರೀಕ್ಷಾ ಕೊಠಡಿಯೂ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಲಿದ್ದು, ಡಿಜಿಟಲ್ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸಬೇಕು. ಪರೀಕ್ಷೆ ಮುಗಿದ ನಂತರ ಪ್ರಶ್ನೆ ಪತ್ರಿಕೆ ಸುರಕ್ಷಿತವಾಗಿ ಸಾಗಿಸಲು 5 ಮಾರ್ಗ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸುವಂತೆ ಸಂಬಅಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಕೇವಲ ಭದ್ರತೆಯಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೂ ಗಾಳಿ, ಬೆಳಕು ಮತ್ತು ಶೌಚಾಲಯದಂತಹ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು. ಬೇಸಿಗೆಯ ಹಿನ್ನೆಲೆಯಲ್ಲಿ ಪ್ರತಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು ಮತ್ತು ತುರ್ತು ಚಿಕಿತ್ಸೆಗಾಗಿ ಆರೋಗ್ಯ ಸಹಾಯಕಿಯರ ತಂಡ ನಿಯೋಜಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದ ಅವರು, ಒಟ್ಟಾರೆಯಾಗಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ದೋಷಮುಕ್ತವಾಗಿ ನಡೆಸಿ ಯಶಸ್ವಿಗೊಳಿಸಿ ಎಂದರು.ಪರೀಕ್ಷೆ-1ರಲ್ಲಿ ಫಲಿತಾಂಶ ಸುಧಾರಣೆ ಬಯಸುವವರಿಗೆ ಮತ್ತು ಅನುತ್ತೀರ್ಣರಾದವರಿಗೆ ಇದು ಸುವರ್ಣಾವಕಾಶ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆಯಲು ಪೂರಕ ವಾತಾವರಣ ಸಿದ್ಧಪಡಿಸಲಾಗಿದೆ ಎಂದು ಎಸ್‌ಎಸ್‌ಎಲ್‌ಸಿ ಜಿಲ್ಲಾ ನೋಡಲ್ ಅಧಿಕಾರಿ ಎಚ್.ಎಂ.ಹುಲಿಬಂಡಿ ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಬಿಇಒ ಶೇಖರಪ್ಪ ಹೊರಪೇಟೆ, ವಿವಿಧ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಇದ್ದರು.