ಸಾರಾಂಶ
ಕನಕಗಿರಿ:
ನೌಕರರು ಆದಾಯಕ್ಕೂ ಮೀರಿ ಆಸ್ತಿ ಮಾಡುವುದು ಕಾನೂನು ಬಾಹಿರವಾಗಿದ್ದು, ಪಾರದರ್ಶಕ ಆಡಳಿತ ನಡೆಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಪ್ಪ ಈಟಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದರಿಂದ ನೆಮ್ಮದಿ ಹಾಳಾಗಲಿದೆ. ಸರ್ಕಾರದ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಳ್ಳಬಾರದು. ನಿಯಮ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
೧೯೮೬ರಲ್ಲಿ ಲೋಕಾಯುಕ್ತ ಕಾಯ್ದೆ ಆರಂಭಗೊಂಡಿದ್ದು, ೨೦೨೨ರಲ್ಲಿ ಮೊದಲಿದ್ದಂತೆ ಲೋಕಾಯುಕ್ತಕ್ಕೆ ಅಧಿಕಾರ ನೀಡಲಾಗಿದೆ. ಅರ್ಜಿದಾರರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.೨೦೧೯ರಲ್ಲಿ ಆಶ್ರಯ ಮನೆಗಾಗಿ ಅರ್ಜಿ ಸಲ್ಲಿಸಿದ್ದ ೧೦ನೇ ವಾರ್ಡಿನ ನಿವಾಸಿ ಹಜರತ್‌ಬೀ ಅವರು, ಪಟ್ಟಣ ಪಂಚಾಯಿತಿ ಸ್ಪಂದಿಸಿಲ್ಲ. ಪಂಚಾಯಿತಿಗೆ ಹೋಗಿ ಕೇಳಿದರೆ ಆಶ್ರಯ ಮನೆ ಮಂಜೂರಾತಿಯಾಗಿಲ್ಲ. ಮಂಜೂರಾದ ಬಳಿಕ ಹಂಚಿಕೆ ಮಾಡುವುದಾಗಿ ಹೇಳುತ್ತಿದ್ದಾರೆಂದು ಕಣ್ಣೀರಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಪಪಂನ ಪುರುಷೋತ್ತಮ ಪತ್ತಾರ, ಆಶ್ರಯ ಮನೆ ಮಂಜೂರಾತಿಯಾಗಿದೆ. ಅರ್ಜಿದಾರರ ನಿವೇಶನ ಸಮಸ್ಯೆ ಇದೆ ಎಂದು ದಾಖಲೆಗಳನ್ನು ಲೋಕಾಯುಕ್ತರಿಗೆ ಸಲ್ಲಿಸಿ ಸಮಸ್ಯೆಗೆ ತೆರೆ ಎಳೆದರು.ಪಟ್ಟಣದ ತಾವರಗೇರಾ ರಸ್ತೆಯ ಎಪಿಎಂಸಿ ಕಾಂಪೌಂಡ್ ಮಾಯವಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ಕಾಂಪೌಂಡ್ ಕೆಡವಲಾಗಿದೆ. ಸದರಿ ಭೂಮಿ ನಮ್ಮ ಕುಟುಂಬಕ್ಕೆ ಸೇರಿದ್ದಾಗಿದ್ದು, ಸಮಸ್ಯೆ ಸರಿಪಡಿಸುವ ಮೂಲಕ ನ್ಯಾಯ ಕೊಡಿಸಬೇಕು. ಇಲ್ಲವಾದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ರಂಗಾರೆಡ್ಡಿ ಗಚ್ಚಿನಮನಿ ತಿಳಿಸಿದರು.
ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಪಂನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿರುವ ಇಮಾಮ್‌ಸಾಬ್ ಕನಕಗಿರಿಯ ಚೆನ್ನಶ್ರೀ ಪಿಯು ಕಾಲೇಜಿನಲ್ಲಿ ಅರೇಕಾಲಿಕ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ಗ್ರಾಪಂ ಕಚೇರಿಗೆ ೧೧ ತಿಂಗಳಿಂದ ಹೋಗಿಲ್ಲ. ಆದರಿಂದ ಪುವರ್ನಸತಿ ಕಾರ್ಯಕರ್ತನಾಗಿ ನನ್ನನ್ನು ನೇಮಿಸಿಕೊಳ್ಳಿ ಎಂದು ಜಬ್ಬಲಗುಡ್ಡದ ವಿಕಲಚೇತನ ಯಮನೂರಪ್ಪ ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.ಕನಕಗಿರಿ-ಕಾರಟಗಿ ರಸ್ತೆ ಅಗಲೀಕರಣ ಆರಂಭಗೊಂಡಿದ್ದು, ಕೆ. ಕಾಟಾಪುರ ಗ್ರಾಮದ ರೈತರ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಪರಿಹಾರ ನೀಡಬೇಕು. ಇರುವ ಅಲ್ಪಸ್ವಲ್ಪ ಭೂಮಿಯನ್ನು ನಂಬಿ ಬದುಕುತ್ತಿರುವ ನಮಗೆ ಅನ್ಯಾಯವಾಗಿದೆ. ಸರ್ಕಾರದಿಂದ ಪರಿಹಾರ ಒದಗಿಸಿ ನಮಗೆ ನ್ಯಾಯ ಕೊಡಿಸಬೇಕೆಂದರು ರೈತರು ದೂರು ಸಲ್ಲಿಸಿದರು.
ಹೀಗೆ ಹತ್ತಾರು ಅರ್ಜಿಗಳಿಗೆ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಂದ ವಾರದೊಳಗೆ ವರದಿ ಪಡೆದು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ಟಿ. ರಾಜಶೇಖರ, ಬಿಇಒ ನಟೇಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷಿ, ತಾಪಂ ಸಹಾಯಕ ನಿರ್ದೇಶಕಿ ಶರಪೋನ್ನಿಸಾಬೇಗಂ, ಶಿಕ್ಷಣ ಸಂಯೋಜಕ ಆಂಜನೇಯಸ್ವಾಮಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರರಿದ್ದರು.