ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿಬೆನ್ನುಹುರಿ (ಸ್ಪೈನಲ್ ಗಾರ್ಡ್) ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಗಾಲಿ ಕುರ್ಚಿ ಜಾಥಾವನ್ನು ಫೆ. 7,8 ಹಾಗೂ 9 ರಂದು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸೇವಾ ಭಾರತಿ ಖಜಾಂಜಿ ಹಾಗೂ ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್, ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರು ಸರ್ಕಾರದ ಯೋಜನೆಗಳು ಪಡೆಯವಲ್ಲಿ ಅಸಾಧ್ಯ ಪರಿಸ್ಥಿತಿಯಲ್ಲಿದ್ದಾರೆ. ಜೊತೆಗೆ ನುರಿತ ತಜ್ಞ ವೈದ್ಯರ ಕೊರತೆಯಿಂದ ಆರೋಗ್ಯ ಸಮಸ್ಯೆಯಿಂದ ಹೊರಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಕಳೆದ 5 ವರ್ಷಗಳಿಂದ ರಾಜ್ಯದ 7 ಜಿಲ್ಲೆಗಳಲ್ಲಿ ಸಂಘಟನೆ ಮೂಲಕ ಅರಿವು ಮೂಡಿಸಿ ಸ್ಥೈರ್ಯ ತುಂಬಿ ಅಗತ್ಯ ನೆರವು ನೀಡಲಾಗುತ್ತಿದೆ.ಸೇವಾ ಭಾರತಿ, ಸೇವಾಧಾಮ, ವಿಕಾಸ್ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ, ಶ್ರೀ ಕಾವೇರಿ ಕೃಪ ಕಲ್ಯಾಣ ಸೇವಾ ಸಮಿತಿ, ಮಡಿಕೇರಿ ಅಶ್ವಿನಿ ಆಸ್ಪತ್ರೆ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗದವರಿಗೆ 3 ದಿನಗಳ ವಸತಿ ಸಹಿತ ಉಚಿತ ಆರೋಗ್ಯ ತಪಾಸಣೆ ಹಾಗೂ ಗಾಲಿಕುರ್ಚಿ ಜಾಥಾ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಆರೋಗ್ಯ ತಪಾಸಣೆಯೊಂದಿಗೆ ಸಮಾಲೋಚನೆ ಮೂಲಕ ರೋಗಿಗಳನ್ನು ಖಿನ್ನತೆಯಿಂದ ಹೊರಬರುವಂತೆ ಮಾಡಲಾಗುವುದು. ಅಲ್ಲದೆ ಸ್ವಾವಲಂಬಿ ಬದುಕು ರೂಪಿಸುವ ನಿಟ್ಟಿನಲ್ಲಿ ಮನಪರಿವರ್ತಿಸಲಾಗುವುದು ಎಂದರು. ಜಿಲ್ಲೆಯಲ್ಲಿ 36 ಮಂದಿ ಬೆನ್ನುಹುರಿ ಸಮಸ್ಯೆ ಇರುವವರನ್ನು ಗುರುತಿಸಲಾಗಿದೆ. ಅವರಿಗೆ ತಮ್ಮ ಕೆಲಸ ತಾವೇ ಮಾಡಿಕೊಳ್ಳುವಂತೆ ತರಬೇತಿ ನೀಡಲಾಗುತ್ತಿದೆ. ತಿಂಗಳಿಗೆ ಮೂರು ದಿನ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗುರುತಿಸಿದವರ ಪೈಕಿ 8 ಮಂದಿಗೆ ವೀಲ್‌ಚೇರ್, 11 ಜನರಿಗೆ ಆರೋಗ್ಯ ಪರಿಕರ, 14 ಮಂದಿಗೆ ಸೆಲ್ಫ್ ಕೇರ್ ಕಿಟ್ ನೀಡಲಾಗುವುದು. 7ರಂದು ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದು, ವಿಕಾಸ್ ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷೆ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಜಿಲ್ಲಾಸ್ಪತ್ರೆ ಡೀನ್ ಡಾ. ವಿಶಾಲ್ ಕುಮಾರ್, ಶಸ್ತ್ರ ಚಿಕಿತ್ಸಕ ಡಾ. ನಂಜುಂಡಯ್ಯ, ಆರಕ್ಷಕ ಉಪನಿರೀಕ್ಷಕ ಲೋಕೇಶ್, ಕಾವೇರಿ ಕೃಪ ವಿಶ್ವ ಕಲ್ಯಾಣ ಸೇವಾ ಸಮಿತಿ ಟ್ರಸ್ಟಿಗಳಾದ ಬಿ.ವಿ. ಮೋಹನ್ ದಾಸ್, ಎಂ.ಸಿ. ಗೋಖಲೆ, ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ, ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. 9 ರಂದು ಬೆಳಗ್ಗೆ 9 ಗಂಟೆಗೆ ಅಶ್ವಿನಿ ಆಸ್ಪತ್ರೆಯಿಂದ ಜನರಲ್ ತಿಮ್ಮಯ್ಯ ವೃತ್ತದ ತನಕ ವೀಲ್‌ಚೇರ್ ಜಾಥಾ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದರು. ವಿಕಾಸ್ ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಸೇವಾ ಭಾರತಿಯ ಹಿರಿಯ ಫೀಲ್ಡ್ ಕೋಡಿನೇಟರ್ ಆರ್. ಮನು, ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಕೆ. ಮಂಜುನಾಥ್, ಖಜಾಂಜಿ ಬಿ.ಕೆ. ನವೀನ್ ಸುದ್ದಿಗೋಷ್ಠಿಯಲ್ಲಿದ್ದರು.