ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮಹಾಜನ ಕಾಲೇಜಿನಲ್ಲಿ ಶನಿವಾರ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ, ಕ್ರೀಡಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ, ಅಧ್ಯಾಪಕೇತರು ಕ್ಯಾನ್ಸರ್ ಅರಿವು ಕುರಿತು ಜಯಲಕ್ಷ್ಮೀಪುರಂ ಬೀದಿಗಳಲ್ಲಿ ಕ್ಯಾನ್ಸರ್ ಮಹಾಮಾರಿಯ ಬಗ್ಗೆ ಅರಿವು ಮೂಡಿಸಲಾಯಿತು.ಭಾರತ್ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು, ಸರ್ಜಿಕಲ್‌ಆಂಕೊಲಾಜಿಸ್ಟ್ ಮತ್ತು ರೋಬೋಟಿಕ್ ಸರ್ಜನ್ ಹಾಗೂ ಮಹಾಜನ ಹಿರಿಯ ವಿದ್ಯಾರ್ಥಿ ಡಾ. ರಕ್ಷಿತ್ ಶೃಂಗೇರಿ, ರೇಡಿಯೇಷನ್ ಆಂಕೊಲಾಜಿಸ್ಟ್ ಡಾ. ವಿನಯ್ ಕುಮಾರ್‌ಮುತ್ತಗಿ ಅವರೊಂದಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು.ನಂತರ ವಾರದ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡನಾಡಿದ ಅವರು, ಕ್ಯಾನ್ಸರ್ ವರ್ಷದಿಂದ ವರ್ಷಕ್ಕೆ ಬಹು ವೇಗವಾಗಿ ಹರಡುತ್ತಿದೆ. ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ರೋಗದ ಬಗ್ಗೆ ನಾವು ಹೆಚ್ಚೆತ್ತುಕೊಂಡು ಸಮಾಜವನ್ನು ಎಚ್ಚರಿಸಬೇಕಾದ ಅನಿವಾರ್ಯತೆ ಯುವ ಜನತೆಯ ಮೇಲಿದೆ. ಧೂಮಪಾನ, ಮದ್ಯಪಾನ, ಮಾನಸಿಕ ಒತ್ತಡ, ಪರಿಸರ ಮಾಲಿನ್ಯ ಹಾಗೂ ಜಂಕ್ ಫುಡ್‌ನಿಂದ ತೀವ್ರವಾಗಿ ಕ್ಯಾನ್ಸ್‌ರ್ ಹರಡುತ್ತಿದೆ. 2035ರ ವೇಳೆಗೆ ಒಟ್ಟು ಜನಸಂಖ್ಯೆಯಲ್ಲಿ ಶೇ. 50ರಷ್ಟು ಜನ ಕ್ಯಾನ್ಸರ್ ರೋಗಕ್ಕೆತುತ್ತಾಗುತ್ತಾರೆ ಎಂಬ ಸಮೀಕ್ಷೆ ಇದೆ. ಆದ್ದರಿಂದ ಯುವಕರು ಶಿಸ್ತಿನಿಂದ ಕೂಡಿದ ಜೀವನವನ್ನು ರೂಪಿಸಿಕೊಂಡು ಪರಿಸರ ಮಾಲಿನ್ಯವನ್ನು ತಡೆಗಟ್ಟಿದರೆ ರೋಗವನ್ನು ನಿಯಂತ್ರಣಕ್ಕೆ ತರಬಹುದು ಎಂದರು.ಬಹಳ ಜನರಲ್ಲಿ ಕ್ಯಾನ್ಸರ್ ಬಂದರೆ ಜೀವನವೇ ಮುಗಿದೇ ಹೋಯಿತು ಎನ್ನುವ ಭಾವನೆ ಇದೆ, ಇದು ಸರಿಯಲ್ಲ, ಪ್ರಾರಂಭದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣವಾಗುತ್ತದೆ ಎಂಬ ಅರಿವಿನ ಕೊರತೆಯಿಂದ ಪ್ರತಿ ವರ್ಷ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರಪಂಚದಲ್ಲಿ ಭಾರತ ಕ್ಯಾನ್ಸರ್ 3ನೇ ಸ್ಥಾನ ಪಡೆದಿದೆ. ಗ್ರಾಮೀಣ ಪ್ರದೇಶದ ಜನರಿಗಿಂತ ನಗರ ಪ್ರದೇಶಗಳ ಜನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಆಧುನಿಕ ಜೀವನ ಶೈಲಿಯೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.ಕ್ಯಾನ್ಸರ್ ನಂತಹ ಭಯಾನಕರೋಗವನ್ನು ತಡೆಗಟ್ಟುವಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜು ನಮ್ಮೊಂದಿಗೆ ಕೈಜೋಡಿಸಿ ನಿರಂತರವಾಗಿ ಅರಿವು ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದು ಶ್ಲಾಘಿಸಿದರು.ಭಾರತ್ ಕ್ಯಾನ್ಸರ್ ವೈದ್ಯರಾದ ಡಾ. ರಕ್ಷಿತ್ ಶೃಂಗೇರಿ ಮತ್ತು ಡಾ. ವಿನಯ್‌ಕುಮಾರ್ ಮುತ್ತಗಿ ಅವರನ್ನು ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಅಧ್ಯಾಪಕ, ಅಧ್ಯಾಪಕೇತರ ಹಾಗೂ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.