ಹುಬ್ಬಳ್ಳಿ:
ಸದಾ ಜನರೊಂದಿಗೆ ಒಡನಾಟ, ಜನಜಂಗುಳಿಯಲ್ಲಿಯೇ ಮೂರುವರೆ ದಶಕಗಳ ಬಸ್ ಕಂಡಕ್ಟರ್ ವೃತ್ತಿ ಜೀವನದಲ್ಲಿ ತಾವು ಕಂಡ ವಿಸ್ಮಯ ಸಂಗತಿ, ಮನುಷ್ಯ ಸಹಜ ನಡವಳಿಕೆ, ಅಪರೂಪದ ಅನುಭವಗಳನ್ನು ಕ್ರೋಡೀಕರಿಸಿ ಪುಸ್ತಕ ರಚಿಸಿದ ನಿವೃತ್ತ ಕಂಡಕ್ಟರ್ ಮಹಾಂತೇಶ ವೀ. ಕೋಳಿವಾಡ ಅವರು ಬರೆದ `ಬಸ್ ಪ್ರಪಂಚ'''''''' ಕೃತಿ ಭಾನುವಾರ ನವನಗರ ಆನಂದವನ ಆಶ್ರಯದಲ್ಲಿ ಲೋಕಾರ್ಪಣೆಗೊಂಡಿತು.ಕೃತಿ ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಮೋಹನ ಹೆಗಡೆ, ಕೃತಿಕಾರ ಮಹಾಂತೇಶ ಅವರು ವೃತ್ತಿಯನ್ನು ಗೌರವದಿಂದ ಕಂಡವರು. ವೃತ್ತಿಯಲ್ಲಿ ಜನರ ಪ್ರೋತ್ಸಾಹ, ಸ್ಪಂದನೆ, ಪ್ರಾಮಾಣಿಕತೆ, ಶ್ರೇಷ್ಠತೆ ಬೆಳೆಸಿಕೊಳ್ಳಬಹುದಾದ ಅಂಶಗಳನ್ನು ಕೃತಿಯಲ್ಲಿ ತಿಳಿಸಿದ್ದಾರೆ. ಅವರು ಮತ್ತಷ್ಟು ಕೃತಿಗಳನ್ನು ರಚಿಸುವಂತಾಗಲಿ ಎಂದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ನಿರ್ವಾಹಕರದ್ದು ಅತೀ ಶಿಸ್ತುಬದ್ಧ ಜೀವನ. ಬಸ್‌ನ್ನು ಅವರು ಸಾಕಷ್ಟು ಪ್ರೀತಿಸುತ್ತಾರೆ. ಬಸ್‌ನೊಂದಿಗೆ ನಮ್ಮ ಇಡೀ ಜೀವನವನ್ನು ನಾವು ಸಾಗಿಸಿದ್ದೇವೆ. ವೃತ್ತಿ ಜೀವನದಲ್ಲಿ ಬೇರೆ ಬೇರೆ ಪ್ರವೃತ್ತಿಗಳನ್ನು ಬೆಳೆಸಿಕೊಂಡವರೂ ಇದ್ದಾರೆ. ಆ ಸಾಲಿನಲ್ಲಿ ಕೋಳಿವಾಡರು ನಿಲ್ಲುತ್ತಾರೆ ಎಂದರು.ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಈರಣ್ಣ ಜಡಿ, ವಾಣಿಜ್ಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯ ಶಿವಮೊಗ್ಗ ಜಿಲ್ಲೆ ಉಪ ಆಯುಕ್ತ ಆಶೋಕ ಎನ್.ಕೆ, ಕುರುಹಿನಶೆಟ್ಟಿ ಸಮಾಜದ ಬೆಂಗಳೂರು ಕೇಂದ್ರ ಸಂಘದ ನಿರ್ದೇಶಕ ಎಂ.ಪಿ. ಶಿವಕುಮಾರ, ಮಹಿಳಾ ಘಟಕದ ಗೀತಾ ನೆಲ್ಲೂರ, ನೇಕಾರ ಸಮುದಾಯ ಒಕ್ಕೂಟಗಳ ಧಾರವಾಡ ಜಿಲ್ಲಾಧ್ಯಕ್ಷ ರವೀಂದ್ರ ಹರ್ತಿ, ನಿವೃತ್ತ ಕಂಡಕ್ಟರ್ ನಿಂಗಪ್ಪ ನರಗುಂದ, ವಿದ್ಯಾ ಅನೂಪ್ ಮಾತನಾಡಿದರು.
ಈ ವೇಳೆ ಕೃತಿಕಾರರಾದ ಮಹಾಂತೇಶ ಕೋಳಿವಾಡ, ಪತ್ನಿ ಸುಮಂಗಲಾ ಅವರನ್ನು ವಿವಿಧ ಗಣ್ಯರು ಸನ್ಮಾನಿಸಿದರು. ನಿವೃತ್ತ ಅಧಿಕಾರಿ ಬಸವರಾಜ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ಗುಡ್ಡಾನವರ ಸ್ವಾಗತಿಸಿದರು. ವಕೀಲ ಎಂ.ವಿ. ರೋಣದ ಕೃತಿ ಪರಿಚಯಿಸಿದರು. ವಿವಾನ್ ಕೋಳಿವಾಡ ಪ್ರಾರ್ಥಿಸಿದರು. ನಂದಿನಿ ಕೋಳಿವಾಡ ನಿರೂಪಿಸಿದರು.