ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ ಎಲ್ಲ 5 ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಈ ದಿಸೆಯಲ್ಲಿ ಗ್ಯಾರಂಟಿ ಯೋಜನೆಗಳು ಶೇ.100ರಷ್ಟು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಫೆ.18ರಂದು ಪಟ್ಟಣದ ಆಡಳಿತ ಸೌಧ ಹಿಂಭಾಗದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರತಿ ತಾಲೂಕಿನಲ್ಲಿ ಸಮಾವೇಶ ಆಯೋಜಿಸುವ ಮೂಲಕ ತಾಂತ್ರಿಕ ದೋಷಗಳನ್ನು ಪರಿಹರಿಸಿ, ಅರ್ಹ ಫಲಾನುಭವಿಗಳನ್ನು ಗ್ಯಾರಂಟಿ ಯೋಜನೆಗೆ ಒಳಪಡುವಂತೆ ಮಾಡಲಾಗುವುದು. ಈ ಹಿನ್ನೆಲೆ ತಾಲೂಕಿನಲ್ಲಿ ಸಹ ಈ ಗ್ಯಾರಂಟಿ ಯೋಜನೆಯು ಶೇ. 99ರಷ್ಟು ಈಡೇರಿಸಿದೆ. ಬಾಕಿ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಯೋಜನೆಯಿಂದ ವಂಚಿತರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ₹10.74 ಕೋಟಿಯಷ್ಟು ಹಣ ಮಹಿಳೆಯರ ಖಾತೆಗೆ ಜಮೆ ಆಗುತ್ತಿದೆ. ಗೃಹ ಜ್ಯೋತಿಯಡಿ 37,744 ಮನೆಗಳಿಗೆ ಯಶಸ್ವಿಯಾಗಿ ಉಚಿತ ವಿದ್ಯುತ್ ಪೂರೈಕೆ ಆಗುತ್ತಿದೆ. ಶಕ್ತಿ ಯೋಜನೆಯಡಿ, 12,74,688 ಮಹಿಳೆಯರು ತಾಲೂಕಿನ ಮಾರ್ಗವಾಗಿ ಸಂಚಾರ ಮಾಡಿದ್ದು, 5,41,09,935 ಮಹಿಳೆಯರು ತಾಲೂಕಿನಿಂದ ಹೊರ ತಾಲೂಕುಗಳಿಗೆ ಸಂಚರಿಸಿದ್ದಾರೆ. ಉಚಿತ ಅಕ್ಕಿ ಯೋಜನೆಯಡಿ 55,947 ಕುಟುಂಬಗಳು ಉಚಿತ ಅಕ್ಕಿ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಯೋಜನೆಗಳನ್ನು ಜಾತ್ಯತೀತ, ಪಕ್ಷಾತೀತವಾಗಿ ನೀಡಿದೆ. ಜನಸಾಮಾನ್ಯರ ಸಹಿತ ರಾಜ್ಯದ ಎಲ್ಲ ವರ್ಗದ ಜನತೆ ಅತಿ ಹೆಚ್ಚಿನ ಲಾಭ ಪಡೆದುಕೊಂಡಿದ್ದಾರೆ, ಗ್ಯಾರಂಟಿ ಯೋಜನೆ ವಿರುದ್ಧವಾಗಿ ಮಾತನಾಡುತ್ತಿರುವವರು ಬಿಜೆಪಿಗರು ಮಾತ್ರ ಎಂದು ಲೇವಡಿ ಮಾಡಿದರು.
ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪುರಸಭಾ ಸದಸ್ಯ ನಾಗರಾಜ್ ಗೌಡ, ಗೋಣಿ ಪ್ರಕಾಶ್, ಶಕುಂತಲಮ್ಮ, ಸೌಭಾಗ್ಯಮ್ಮ, ಜಯಶ್ರಿ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕವಲಿ ಗಂಗಾಧರ್, ಮುಖಂಡರು ಹಾಜರಿದ್ದರು.- - -
ಬಾಕ್ಸ್ ಬಿಜೆಪಿ ಸುಧಾರಿಸದಿದ್ದರೆ ಆಮಿಷಗಳ ಇರುದ್ಧ ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ಕಾಂಗ್ರೆಸ್ ನೀಡಿರುವ ಯೋಜನೆಗಳಿಂದ ಬಿಜೆಪಿಗೆ ಈಗಾಗಲೇ ಸೋಲಿನ ಭಯ ಹುಟ್ಟಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಮರಾಠ ಸಮಾಜದವರು ಆರಾಧ್ಯ ದೈವ ತುಳಜಾ ಭವಾನಿ ಹಾಗೂ ವಿವಿಧ ದೇವಸ್ಥಾನಗಳ ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಸಂದರ್ಭ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮರಾಠ ಸಮಾಜದ ಮನೆ ಮನೆಗಳಿಗೆ ಮಹಿಳೆಯರಿಗೆ ಉಡಿ ನೆಪದಲ್ಲಿ ಸೀರೆ, ಅರಿಶಿಣ, ಕುಂಕುಮ, ಅಕ್ಷತೆ ಜತೆಗೆ ಪ್ರಧಾನಿ ಮೋದಿ ಭಾವಚಿತ್ರದ ಕ್ಯಾಲೆಂಡರ್ ಕೊಟ್ಟು ಬರುತ್ತಿದ್ದಾರೆ. ಈ ವಿಷಯ ಗಮನಕ್ಕೆ ಬಂದಿದೆ. ಬಿಜೆಪಿ ಮುಖಂಡರು ಇದೇ ರೀತಿ ಮುಂದುವರಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.- - - -16ಕೆಎಸ್.ಕೆಪಿ1: ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿದರು.