ಸಂಘರ್ಷ ವಾತಾವರಣ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕೋಟಾ ಶ್ರೀನಿವಾಸ ಪೂಜಾರಿ

| Published : Mar 25 2024, 12:50 AM IST

ಸಂಘರ್ಷ ವಾತಾವರಣ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಕೋಟಾ ಶ್ರೀನಿವಾಸ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತದಲ್ಲಿ ಸಂಪೂರ್ಣ ವಿಫಲವಾದ ರಾಜ್ಯ ಸರ್ಕಾರ ಅಸಹಾಯಕವಾಗಿ ಕೇಂದ್ರ ಸರ್ಕಾರವನ್ನು ದೂರುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅಸಹಾಯಕವಾಗಿ ಕೇಂದ್ರ ಸರ್ಕಾರವನ್ನು ದೂರುತ್ತಿದೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಆಡಳಿತದಲ್ಲಿ ಸಂಪೂರ್ಣ ವಿಫಲವಾದ ರಾಜ್ಯ ಸರ್ಕಾರ ಅಸಹಾಯಕವಾಗಿ ಕೇಂದ್ರ ಸರ್ಕಾರವನ್ನು ದೂರುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ಪಟ್ಟಣದ ಪುರಭವನದಲ್ಲಿ ಕೊಪ್ಪ ತಾಲೂಕು ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಪರಿವಾರ ಸಮಾಗಮ ಸಮಾವೇಶದಲ್ಲಿ ಮಾತನಾಡಿ, ಕೇಂದ್ರದ ಜೊತೆ ಸಂಘರ್ಷ ವಾತಾವರಣ ನಿರ್ಮಾಣ ಮಾಡಿ ಭಾರತ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದ ರಾಜ್ಯ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದು ದೂರಿದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಜಯಪ್ರಕಾಶ್ ಹೆಗ್ಡೆಯವರನ್ನು ಕಾಂಗ್ರೆಸ್‌ನಿಂದ ಹೊರಹಾಕಿದ್ದರು. ನಾವೆಲ್ಲರೂ ಒಮ್ಮತದಿಂದ ಬರಮಾಡಿಕೊಂಡಿದ್ದೆವು. ಹೆಗ್ಡೆಯವರನ್ನು ಬಿಜೆಪಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಅವೈಜ್ಞಾನಿಕ ಜಾತಿಗಣತಿ ವರದಿಯನ್ನು ಹೆಗ್ಡೆಯವರು ಕಾಂಗ್ರೆಸ್ ಗೆ ನೀಡುವ ಮೂಲಕ ಜಾತಿ ಜಾತಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಮುಂದಿನ ತಲೆಮಾರಿನ ಬಗ್ಗೆ ಯೋಚನೆ ಮಾಡಿ ಮತ ನೀಡಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ, ‘ವಿಶ್ವ ಮೆಚ್ಚಿದ ನಾಯಕ ಮೋದಿ. ಮೋದಿ ಮೆಚ್ಚಿದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ. ಜಯಪ್ರಕಾಶ್ ಹೆಗ್ಡೆಯವರು ಸಜ್ಜನ ಮುಖವಾಡ ಹಾಕಿ ಮತ ಕೇಳಲು ಮುಂದಾಗಿದ್ದಾರೆ. ಅವರು ಪಕ್ಷಾಂತರ ಮಾಡುವ ವ್ಯಕ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರು ಮಾತನಾಡಿ, ‘ಈ ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನರೇಂದ್ರ ಮೋದಿ ಬರಬೇಕಾಯಿತು. ಮಕ್ಕಳ ಭವಿಷ್ಯದ ಬಗ್ಗೆ ಕಾಣುವ ಕನಸು ಸಾಕಾರಕ್ಕೆ ಮೋದಿ ಅಧಿಕಾರಕ್ಕೆ ಬರಬೇಕು. ಕೋಟಾ ಶ್ರೀನಿವಾಸ ಪೂಜಾರಿ ಅಭ್ಯರ್ಥಿ ಎಂದಾಗ ಕಾರ್ಯಕರ್ತರ ಮುಖದಲ್ಲಿ ಮಂದಹಾಸ ಮೂಡಿದೆ’ ಎಂದು ಹೇಳಿದರು.

ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ,ಉಪಾಧ್ಯಕ್ಷ ಎಂ.ಕೆ.ಕಿರಣ್, ಹಿಂದುಳಿದ ವರ್ಗದ ಕಾರ್ಯದರ್ಶಿ ರಾಜಪ್ಪ, ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಶೃಂಗೇರಿ ಶಿವಣ್ಣ, ಶೃಂಗೇರಿ ಕ್ಷೇತ್ರ ಚುನಾವಣಾ ಸಂಚಾಲಕ ಎಸ್.ಎನ್. ರಾಮಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಬಲ ರಾವ್, ಪ್ರಧಾನ ಕಾರ್ಯದರ್ಶಿ ಜೆ.ಪುಣ್ಯಪಾಲ್, ಕಾರ್ಯದರ್ಶಿ ಅದ್ದಡ ಸತೀಶ್, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಮಾಲತೇಶ್, ಪ್ರಧಾನ ಕಾರ್ಯದರ್ಶಿ ಶರತ್ ಯಡ್ತಾಳ್ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷೆ ಪದ್ಮಾವತಿ ರಮೇಶ್, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಶೃತಿ ರೋಹಿತ್ ಉಪಸ್ಥಿತರಿದ್ದರು.